





ಮಡಿಕೇರಿ ಏ.5 NEWS DESK : ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದ್ದು, ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಪ್ರಮುಖರ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿ.ಜಿ.ಮೋಹನ್ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿನಯ್ ಆತ್ಮಹತ್ಯೆ ಪ್ರಕರಣದಲ್ಲಿ ಜಿಲ್ಲೆಯ ಶಾಸಕರಿಬ್ಬರ ಪಾತ್ರ ಇಲ್ಲದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ಕಾನೂನಿಗೆ ವಿರುದ್ಧವಾದ ಆರೋಪಗಳನ್ನು ಮಾಡುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳ ಮೂಲಕವೇ ಜನಪ್ರಿಯತೆ ಗಳಿಸುತ್ತಿರುವ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ವ್ಯಕ್ತಿತ್ವಕ್ಕೆ ಚ್ಯುತಿ ತರಬಹುದೆನ್ನುವ ಹಗಲುಗನಸನ್ನು ಬಿಜೆಪಿ ಮಂದಿ ಕಾಣುತ್ತಿದ್ದಾರೆ. ಈಗಾಗಲೇ ವಿನಯ್ ಪ್ರಕರಣದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯಿಂದ ಸತ್ಯಾಂಶ ಹೊರಬರಲಿದ್ದು, ತಪ್ಪು ಯಾರಿಂದ ನಡೆದಿದೆ ಎಂದು ಸಾಬೀತಗಲಿದೆ. ತನಿಖೆಯ ಆರಂಭದಲ್ಲೆ ಶಾಸಕರಿಬ್ಬರನ್ನು ತಪ್ಪಿತಸ್ಥರೆಂದು ಬಿಜೆಪಿ ಪ್ರತಿಬಿಂಬಿಸುತ್ತಿರುವುದು ಸರಿಯಲ್ಲ. ಜಿಲ್ಲೆಯ ಜನರ ಪ್ರೀತಿಗಳಿಸಿರುವ ಇಬ್ಬರು ಶಾಸಕರು ಈ ರೀತಿಯ ಕಾನೂನಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ಎಂದಿಗೂ ತೊಡಗಿಸಿಕೊಂಡಿಲ್ಲ. ಶಾಸಕರಿಬ್ಬರ ಜನಪ್ರಿಯತೆಯನ್ನು ಸಹಿಸದ ಬಿಜೆಪಿ ಮಂದಿ ಕಪೋಲಕಲ್ಪಿತ ಹೇಳಿಕೆಗಳನ್ನು ನೀಡುತ್ತಿದ್ದು, ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ವಿನಯ್ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಕಾನೂನು ಉಲ್ಲಂಘಿಸಿ ಪ್ರತಿಭಟನೆಗಳನ್ನು ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಬಿಜೆಪಿ ಪ್ರಮುಖರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಶಾಸಕರಿಬ್ಬರ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕೆಂದು ವಿ.ಜಿ.ಮೋಹನ್ ಒತ್ತಾಯಿಸಿದ್ದಾರೆ.