




ಮಡಿಕೇರಿ NEWS DESK ಏ.5 : ಬಿಜೆಪಿ ಕಾರ್ಯಕರ್ತ ವಿನಯ್ ಅವರ ಆತ್ಮಹತ್ಯಾ ಪ್ರಕರಣ ವಿಷಾದನೀಯ. ಆದರೆ ಈ ಪ್ರಕರಣದಲ್ಲಿ ಯಾವುದೇ ತಪ್ಪು ಎಸಗದ ಕೊಡಗಿನ ಇಬ್ಬರು ಶಾಸಕರನ್ನು ಎಳೆದು ತರುತ್ತಿರುವ ಬಿಜೆಪಿ ನಡೆ ಖಂಡನೀಯವೆಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಹಾಗೂ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿನಯ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ದುಃಖಕರ ಬೆಳವಣಿಗೆಯಾಗಿದೆ. ನೋವಿನಲ್ಲಿರುವ ಅವರ ಕುಟುಂಬಕ್ಕೆ ಪಕ್ಷ ಸಾಂತ್ವನ ಹೇಳುತ್ತದೆ. ಆದರೆ ಆತ್ಮಹತ್ಯೆ ಪ್ರಕರಣವನ್ನು ನೆಪಮಾಡಿಕೊಂಡು ಬಿಜೆಪಿ ಮಂದಿ ಶಾಸಕರಿಬ್ಬರ ರಾಜೀನಾಮೆ ಕೇಳುತ್ತಿರುವುದು ಹಾಸ್ಯಾಸ್ಪದ ಹಾಗೂ ಬಿಜೆಪಿಯ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ ಎಂದು ಟೀಕಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಸೋಲು ಕಂಡಿರುವ ಬಿಜೆಪಿ ಹತಾಶ ಮನೋಭಾವದಿಂದ ಹೊರಬರಲಾಗದೆ ಪ್ರತಿಯೊಂದು ಪ್ರಕಟಣದಲ್ಲೂ ಶಾಸಕರುಗಳನ್ನು ಗುರಿಮಾಡಿ ಪ್ರತಿಭಟನೆಯನ್ನು ನಡೆಸುತ್ತಿದೆ. ವಿನಯ್ ಪ್ರಕರಣದಲ್ಲಿ ವಿನಾಕಾರಣ ಶಾಸಕರಿಬ್ಬರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಡ ಹೇರಲಾಗುತ್ತಿದೆ. ಬೆಂಗಳೂರು ಪೊಲೀಸರು ಈಗಾಗಲೇ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದು, ಇದು ಪೂರ್ಣಗೊಳ್ಳುವ ಮೊದಲೇ ಶಾಸಕರಿಬ್ಬರನ್ನು ಬಿಜೆಪಿ ಆರೋಪಿಗಳಂತೆ ಪ್ರತಿಬಿಂಬಿಸುತ್ತಿರುವುದು ಖಂಡನೀಯ ಎಂದು ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಜನಸ್ನೇಹಿ ಆಗಿರುವ ಇಬ್ಬರು ಶಾಸಕರನ್ನು ಹೇಗಾದರು ಮಾಡಿ ಮಣಿಸಲೇಬೇಕು ಎನ್ನುವ ದುರುದ್ದೇಶದಿಂದ ಬಿಜೆಪಿಗರು ವಿನಯ್ ಪ್ರಕರಣವನ್ನು ಮುಂದಿಟ್ಟುಕೊಂಡು ಗೂಬೆಕೂರಿಸುವ ಮತ್ತು ತೇಜೋವಧೆ ಮಾಡುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿಯ ಸುಳ್ಳು ಆರೋಪಗಳು ಹಾಗೂ ರಾಜಕೀಯ ಪ್ರೇರಿತ ಪ್ರತಿಭಟನೆಯಿಂದ ಬೆಸತ್ತ ಜಿಲ್ಲೆಯ ಜನ ಕಳೆದ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಿದ್ದಾರೆ. ಆದರೂ ಎಚ್ಚೆತ್ತುಕೊಳ್ಳದ ಬಿಜೆಪಿ ಸಾಲು ಸಾಲು ಪ್ರತಿಭಟನೆಯನ್ನು ನಡೆಸುತ್ತಿದೆ. ಜಿಲ್ಲೆಯ ಪ್ರಜ್ಞಾವಂತ ಜನರು ಬಿಜೆಪಿಯ ಕ್ಷುಲ್ಲಕ ರಾಜಕಾರಣದ ಬಗ್ಗೆ ತಿಳಿದುಕೊಂಡಿದ್ದಾರೆ. ಆದ್ದರಿಂದ ಕಾನೂನಿಗೆ ಪೂರಕವಾಗಿ ಸಾಕ್ಷ್ಯಾಧಾರಗಳ ಸಹಿತ ಆರೋಪ ಮತ್ತು ಟೀಕೆ ಮಾಡುವ ದೊಡ್ಡ ಗುಣವನ್ನು ಬಿಜೆಪಿ ಇನ್ನಾದರೂ ಬೆಳೆಸಿಕೊಳ್ಳಲಿ ಎಂದು ಆರ್.ಪಿ.ಚಂದ್ರಶೇಖರ್ ಒತ್ತಾಯಿಸಿದ್ದಾರೆ.