




ಮಡಿಕೇರಿ NEWS DESK ಏ.5 : ಬಿಜೆಪಿ ಕಾರ್ಯಕರ್ತ ವಿನಯ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಇಬ್ಬರು ಶಾಸಕರ ವಿರುದ್ಧ ಹುರುಳಿಲ್ಲದ ಆರೋಪ ಮಾಡುತ್ತಿರುವ ಬಿಜೆಪಿ ಮಂದಿಯ ನಡೆ ಖಂಡನೀಯವೆದು ಎನ್‌ಎಸ್‌ಯುಐನ ಮಡಿಕೇರಿ ನಗರ ಘಟಕದ ಅಧ್ಯಕ್ಷ ಅರ್ಜುನ್ ಟಿ.ಆರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿನಯ್ ಅವರ ಸಾವಿನ ಕುರಿತು ನಮಗೂ ದು:ಖವಿದೆ, ಆತ್ಮಹತ್ಯೆ ಪ್ರಕರಣವನ್ನು ಈಗಾಗಲೇ ತನಿಖೆಗೆ ಒಳಪಡಿಸಲಾಗಿದೆ. ಪೊಲೀಸರ ತನಿಖೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಇದರ ನಡುವೆಯೇ ಬಿಜೆಪಿ ರಾಜಕೀಯ ದುರುದ್ದೇಶಕ್ಕಾಗಿ ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವುದನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಅನೇಕ ವರ್ಷಗಳ ನಂತರ ಜಿಲ್ಲೆಯಲ್ಲಿ ಇಬ್ಬರು ಶಾಸಕರುಗಳ ಶತ ಪ್ರಯತ್ನದಿಂದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿದೆ. ಇದೇ ಕಾರಣಕ್ಕೆ ಶಾಸಕದ್ವಯರು ಜನರಿಗೆ ಹತ್ತಿರವಾಗುತ್ತಿದ್ದಾರೆ. ಇದನ್ನು ಸಹಿಸದ ಬಿಜೆಪಿ ವಿನಯ್ ಅವರ ಪ್ರಕರಣವನ್ನು ನೆಪಮಾಡಿಕೊಂಡು ಶಾಸಕರುಗಳ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರತಿಯೊಬ್ಬರು ಕಾನೂನಿಗೆ ಗೌರವ ನೀಡಬೇಕು, ಪೊಲೀಸರ ತನಿಖೆಯ ವರದಿಗಾಗಿ ಕಾಯಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಕಾನೂನು ಇದೆ, ಆದರೆ ಜನರ ದಾರಿ ತಪ್ಪಿಸುವುದಕ್ಕಾಗಿ ಸಾಕ್ಷ್ಯಾಧಾರಗಳಿಲ್ಲದ ಆರೋಪಗಳನ್ನು ಶಾಸಕದ್ವಯರ ಮೇಲೆ ಮಾಡುತ್ತಿರುವುದು ಕಾನೂನಿಗೆ ವಿರುದ್ಧವಾಗಿದೆ. ಆದ್ದರಿಂದ ಸುಳ್ಳು ಆರೋಪ ಮತ್ತು ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕೆಂದು ಅರ್ಜುನ್ ಟಿ.ಆರ್ ಒತ್ತಾಯಿಸಿದ್ದಾರೆ.