




ಮಡಿಕೇರಿ NEWS DESK ಏ.6 : ಬಿಜೆಪಿ ಕಾರ್ಯಕರ್ತ ವಿನಯ್ ಅವರ ಆತ್ಮಹತ್ಯೆ ಪ್ರಕರಣಕ್ಕೂ ಶಾಸಕದ್ವಯರಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಬಿಜೆಪಿ ರಾಜಕೀಯ ದುರುದ್ದೇಶದಿಂದ ಅಪಪ್ರಚಾರದಲ್ಲಿ ತೊಡಗಿದೆ ಎಂದು ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಅಬ್ದುಲ್ ರಶೀದ್ ಪಿ.ಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರಳ ಸಜ್ಜನಿಕೆಯ ರಾಜಕಾರಣಿಗಳಾಗಿರುವ ವಿರಾಜಪೇಟೆಯ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿಯ ಶಾಸಕ ಡಾ.ಮಂತರ್ ಗೌಡ ಅವರುಗಳು ಪ್ರಾಮಾಣಿಕತೆ ಮತ್ತು ಮಾನವೀಯತೆಗೆ ಹೆಸರಾದವರು. ವಿನಯ್ ಸಾವಿನ ಪ್ರಕರಣದಲ್ಲಿ ಶಾಸಕರಿಬ್ಬರ ವಿರುದ್ಧ ಮಾಡುತ್ತಿರುವ ಆರೋಪ ಆಧಾರರಹಿತವೆಂದು ತಿಳಿಸಿದ್ದಾರೆ. ವಿನಯ್ ಆತ್ಮಹತ್ಯೆ ಮಾಡಿಕೊಳ್ಳಬಾರದಾಗಿತ್ತು, ಈ ಬಗ್ಗೆ ನಮಗೂ ಬೇಸರವಿದೆ. ಆದರೆ ಬಿಜೆಪಿ ಸಾವಿನ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಶಾಸಕದ್ವಯರ ಜನಸ್ನೇಹಿ ಗುಣ, ಅಭಿವೃದ್ಧಿ ಕಾರ್ಯ, ಜನಪ್ರಿಯತೆ ಮತ್ತು ರಾಜಕೀಯ ಬೆಳವಣಿಗೆಯನ್ನು ಸಹಿಸಲಾಗದ ಬಿಜೆಪಿ ಮಂದಿ ರಾಜಕೀಯ ಷಡ್ಯಂತ್ರ ಹೂಡಿ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆದರೆ ಶಾಸಕರಿಬ್ಬರ ಪರ ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಇಡೀ ಜಿಲ್ಲೆಯ ಜನರೇ ಬಲವಾಗಿ ನಿಲ್ಲಲಿದ್ದಾರೆ ಎಂದು ಹೇಳಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರು ಹೆಸರು ಉಲ್ಲೇಖಿಸಿದಾಕ್ಷಣ ಸಂಬಂಧಿಸಿದವರನ್ನು ಬಿಜೆಪಿ ಅಪರಾಧಿಗಳಂತೆ ಪ್ರತಿಬಿಂಬಿಸುವುದು ಕಾನೂನಿಗೆ ವಿರುದ್ಧವಾಗಿದೆ. ಈ ರೀತಿಯ ಪ್ರಕರಣಗಳು ತನಿಖೆ ಮತ್ತು ನ್ಯಾಯಾಲಯದ ಮೂಲಕ ಬಗೆಹರಿಯಬೇಕು. ಕಾನೂನಿನ ಮೇಲೆ ಗೌರವವಿಲ್ಲದ ಬಿಜೆಪಿ ಜನರ ಹಾದಿ ತಪ್ಪಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೋರಾಟದ ಹೆಸರಿನಲ್ಲಿ ಬೀದಿಗಿಳಿಯುತ್ತಿದೆ. ಬಿಜೆಪಿಯ ರಸ್ತೆ ತಡೆ ಪ್ರತಿಭಟನೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಜನಜೀವನಕ್ಕೆ ಅಡ್ಡಿ ಉಂಟು ಮಾಡುತ್ತಿರುವ ಮತ್ತು ಶಾಸಕದ್ವಯರ ವಿರುದ್ಧ ಆಧಾರ ರಹಿತ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಬಿಜೆಪಿ ಪ್ರಮುಖರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಬ್ದುಲ್ ರಶೀದ್ ಪಿ.ಎಂ ಒತ್ತಾಯಿಸಿದ್ದಾರೆ.