ವಿರಾಜಪೇಟೆ ಏ.8 NEWS DESK : ದಾನಗಳನ್ನು ಮಾಡುವುದರಿಂದ ಮಾನವನ ಜೀವನ ಸಾರ್ಥಕವಾಗುತ್ತದೆ ಎಂದು ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರುಗಳಾದ ರೆ.ಫಾ. ಜೇಮ್ಸ್ ಡೊಮಿನಿಕ್ ಅಭಿಪ್ರಾಯಪಟ್ಟರು. ವಿರಾಜಪೇಟೆ ಮದರ್ ತೆರೇಸಾ ಸೇವಾ ಕೇಂದ್ರದ ವತಿಯಿಂದ ಸಂತ ಅನ್ನಮ್ಮ ದ್ವಿಶತಮಾನೋತ್ಸವ ಸಭಾಂಗಣದಲ್ಲಿ ಜರುಗಿದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯನು ದಾನ ಧರ್ಮಗಳನ್ನು ಹೆಚ್ಚು ಮಾಡುವುದು ಸತ್ಕಾರ್ಯವಾಗಿದ್ದು. ದೇವರ ಆಶೀರ್ವಾದವು ಲಭಿಸುತ್ತದೆ. ಸಮಾಜಮುಖಿ ಚಿಂತನೆಗಳಿಂದ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆ ನಿಟ್ಟಿನಲ್ಲಿ ಮದರ್ ತೆರೇಸಾ ಸೇವಾ ಕೇಂದ್ರದ ಸಾಮಾಜಿಕ ಕಳಕಳಿಯು ಶ್ಲಾಘನೀಯವಾಗಿದೆ ಎಂದರು. ಇನ್ನು ಮುಂದೆಯೂ ಸಮಾಜಮುಖಿ ಕಾರ್ಯಗಳು ನಡೆಯುವಂತಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮದರ್ ತೆರೇಸಾ ಸೇವಾ ಕೇಂದ್ರದ ಅಧ್ಯಕ್ಷ ಹಾಗೂ ಶಿಕ್ಷಣ ಇಲಾಖೆಯ ನಿವೃತ್ತ ಡಿಡಿಪಿಐ ಪೆರಿಗ್ರೀನ್ ಎಸ್ ಮಚ್ಚಾಡೋ, ಕಳೆದ ಮೂರು ವರ್ಷಗಳಿಂದ ನಮ್ಮ ಸೇವಾ ಕೇಂದ್ರದ ವತಿಯಿಂದ ಪುಸ್ತಕಗಳನ್ನು ವಿತರಣೆ ಮಾಡುತ್ತ ಬಂದಿದ್ದು, ಮೊದಲನೇ ವರ್ಷ 85 ವಿದ್ಯಾರ್ಥಿಗಳಿಗೆ, ಎರಡನೇ ವರ್ಷ 174 ವಿದ್ಯಾರ್ಥಿಗಳಿಗೆ ಹಾಗೂ ಈ ವರ್ಷ ಒಟ್ಟು 155 ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುತ್ತಿದ್ದೇವೆ. ಸರ್ವ ಸದಸ್ಯರುಗಳ ಸಹಕಾರದಿಂದ ಈ ಕಾರ್ಯವು ನಡೆಯುತ್ತಿದ್ದು, ಅದರೊಂದಿಗೆ ಬಡವರಿಗೆ ಔಷಧ ಉಪಚಾರಕ್ಕೆ ಸಹಾಯವನ್ನು ನೀಡಲಾಗುತ್ತಿದೆ. ಜೊತೆಗೆ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು. ಸೇವಾ ಕೇಂದ್ರದ ಸದಸ್ಯರು ಸಮಾಜಮುಖಿ ಕಾರ್ಯಗಳಿಗೆ ನೆರವನ್ನು ನೀಡುತ್ತಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಲ್ ಕೆ ಜಿ ಯಿಂದ ಪದವಿ ವರೆಗಿನ 155 ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿದರು. ಈ ಸಂದರ್ಭ ಧರ್ಮಗುರುಗಳು ಹಾಗೂ ಸಂತ ಅನ್ನಮ್ಮ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಮದಲೈ ಮುತ್ತು, ಮದರ್ ತೆರೇಸಾ ಸೇವಾ ಕೇಂದ್ರದ
ಉಪಾಧ್ಯಕ್ಷ ಮಾರ್ಟಿನ್ ಬರ್ನಾಡ್, ಕಾರ್ಯದರ್ಶಿ ಅನಿತಾ ನೋರೋನ, ಖಜಾಂಚಿ ಜೇಮ್ಸ್ ಮೆನೇಜಸ್, ಜಂಟಿ ಕಾರ್ಯದರ್ಶಿ ಅರುಣಾ ಡಿ ಸೋಜಾ ಹಾಗೂ ಸದಸ್ಯರುಗಳು ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು. ವೈಲೆಟ್ ಡಿಸೋಜಾ ಸ್ವಾಗತಿಸಿದರು. ಪ್ರೆಸಿಲ್ಲ ಅಲ್ಮೆಡ ನಿರೂಪಿಸಿದರು. ಪ್ರಸನ್ನ ಪ್ರಾರ್ಥಿಸಿದರು. ಲೀಲಾ ಮೆನೇಜಸ್ ವಂದಿಸಿದರು.











