






ವಿರಾಜಪೇಟೆ ಏ.8 NEWS DESK : ಕೆದಮುಳ್ಳೂರು ಗ್ರಾಮದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಏ.3ರಂದು ಹಬ್ಬಕ್ಕೆ ಚಾಲನೆ ನೀಡಲಾಯಿತು. ಏ.4ರ ರಾತ್ರಿ ನಾನಾ ತೆರೆ (ಕೋಲ)ಗಳು ನಡೆದವು. ಏ.5ರಂದು ಬೆಳಗ್ಗೆ ಪ್ರಮುಖವಾದ ವಿಷ್ಣುಮೂರ್ತಿ ಕೋಲವು ದೇವಾಲಯದ ಮುಂದೆ ಸಿದ್ಧಪಡಿಸಿದ್ದ ಬೆಂಕಿ ಕೆಂಡದ ಮೇಲೆ 101 ಬಾರಿ ಬೀಳುವ ತೆರೆ ನಡೆಯಿತು. ಇದಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಮಧ್ಯಾಹ್ನ ಚಾಮುಂಡಿ ದೇವಿಯ ಕೋಲ ನಡೆಯಿತು. ಉತ್ಸವದ ಕೊನೆಯ ತೆರೆಯಾದ ಚಾಮುಂಡಿ ದೇವಿ ಕೆಂಪು ವಸ್ತ್ರದಲ್ಲಿ ಕಂಗೋಳಿಸುತ್ತಿತ್ತು. ಸಂಜೆ ದೇವರು ಬನಕ್ಕೆ ತೆರಳಿ ಅಲ್ಲಿ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ವಾರ್ಷಿಕ ತೆರೆ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು. ವಾರ್ಷಿಕ ತೆರೆ ಮಹೋತ್ಸವದಲ್ಲಿ ವಿರಾಜಪೇಟೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.