






ಮಡಿಕೇರಿ ಏ.8 NEWS DESK : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಸಾವಿಗೆ ಕಾರಣರಾದವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ, ಮೃತನ ಸಹೋದರ ಜೀವನ್ ಅವರು ಇಂದು ಮಾಜಿ ಸಂಸದರು, ಶಾಸಕರು, ಜಿಲ್ಲಾ ಬಿಜೆಪಿ ಪ್ರಮುಖರೊಂದಿಗೆ ತೆರಳಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದರು. ದೂರಿನಲ್ಲಿ ಪ್ರಮುಖವಾಗಿ ವಿನಯ್ ಸೋಮಯ್ಯ ಅವರು ಆತ್ಮಹತ್ಯೆ ಮಡಿಕೊಳ್ಳುವುದಕ್ಕೂ ಮೊದಲು ತಮ್ಮ ಮೊಬೈಲ್ ನಿಂದ ಮರಣ ಪತ್ರವನ್ನು ರವಾನಿಸಿದ್ದು, ಅದರಲ್ಲಿ ತಮ್ಮ ಸಾವಿಗೆ ಕಾರಣರಾದವರು ಹಾಗೂ ಮಾನಸಿಕ ಒತ್ತಡ ಹೇರಿದವರ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಪೊಲೀಸ್ ಇಲಾಖಾ ಸಿಬ್ಬಂದಿಯೊಬ್ಬರು ವಿನಯ್ ಸೋಮಯ್ಯ ಅವರಿಗೆ ಕರೆ ಮಾಡಿ ತಹಶೀಲ್ದಾರ್ ಕಚೇರಿಗೆ ಬಂದು ಸಹಿ ಮಾಡುವಂತೆ ಹಾಗೂ ನಿಮ್ಮನ್ನು ರೌಡಿಶೀಟ್‍ಗೆ ಸೇರಿಸುವುದಾಗಿ ಒತ್ತಡ ಹೇರಿರುವುದು ಅವರ ಆತ್ಮಹತ್ಯೆಗೆ ಕಾರಣವಾಗಿರುವುದು ಸ್ಪಷ್ಟವಾಗಿದೆ ಎಂದು ಜೀವನ್ ಕೆ.ಎಸ್. ವಿವರಿಸಿದ್ದಾರೆ. ಇದರೊಂದಿಗೆ ವ್ಯಕ್ತಿಯೊಬ್ಬರು ವಿವಿಧ ಸಾಮಾಜಿಕ ಜಾಲತಾಣದ ವಿವಿಧ ಗ್ರೂಪ್‍ಗಳಲ್ಲಿ ವಿನಯ್ ಸೋಮಯ್ಯ ಅವರ ಫೋಟೋ ಹಾಕಿ ಅವರನ್ನು ಕಿಡಿಗೇಡಿಗಳೆಂದು ತೇಜೋವಧೆ ಮಾಡಿದ್ದಾರೆ. ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬರು ವಿಷ್ಣು ನಾಚಪ್ಪ ಎಂಬುವವರಿಗೂ ಕರೆ ಮಾಡಿ ಒತ್ತಡ ಹಾಕಿದ್ದು, ಇದನ್ನು ಅವರೇ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಲತಾಣಗಳಲ್ಲಿ ವಿನಯ್ ಸೋಮಯ್ಯರ ವಿರುದ್ಧ ಅಪಪ್ರಚಾರ ಮಾಡಿದ ವ್ಯಕ್ತಿಯ ಹಾಗೂ ಕರೆ ಮಾಡಿ ಒತ್ತಡ ಹೇರಿದ ಪೊಲಿಸ್ ಸಿಬ್ಬಂದಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಂಡಿದ್ದಾರೆ. ದೂರು ಸಲ್ಲಿಕೆಯ ಸಂದರ್ಭ ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಅಧ್ಯಕ್ಷರಾದ ರಾಬಿನ್ ದೇವಯ್ಯ, ಬಿ.ಬಿ.ಭಾರತೀಶ್, ವಕ್ತಾರ ಬಿ.ಕೆ.ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನಗರಾಧ್ಯಕ್ಷ ಉಮೇಶ್ ಸುಬ್ರಮಣಿ, ಎಸ್‍ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ ಮತ್ತಿತರ ಪ್ರಮುಖರು ಹಾಜರಿದ್ದರು.