








ಗೋಣಿಕೊಪ್ಪ ಏ.11 NEWS DESK : ಲಕ್ಷಣತೀರ್ಥ ನದಿಗೆ ಅಡ್ಡಲಾಗಿ ಕಟ್ಟಲಾದ ನಿಟ್ಟೂರು ಗ್ರಾಮ ಪಂಚಾಯಿತಿಯ ಮಲ್ಲೂರು ಸೇತುವೆ ನಿರ್ಮಾಣ ಸಂಭ್ರಮವನ್ನು ಸ್ಥಳೀಯ ಗ್ರಾಮಸ್ಥರು ಆಚರಿಸಿದರು. ಮಲ್ಲೂರು ಗ್ರಾಮ ಅಭಿವೃದ್ಧಿ ಸಮಿತಿ ಆಯೋಜಿಸಿದ ಸೇತುವೆ ಸಂಭ್ರಮದಲ್ಲಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಭಾಗವಹಿಸಿ ಗ್ರಾಮಸ್ಥರಿಂದ ಸನ್ಮಾನ ಸ್ವಿಕರಿಸಿದರು. ನಂತರ ಮಾತನಾಡಿದ ಸಂಸದರು, ಗ್ರಾಮಗಳು ಅಭಿವೃದ್ಧಿ ಕಂಡಾಗ ಮಾತ್ರ ನಗರಗಳ ಬೆಳವಣಿಗೆ ಸಾಧ್ಯ ಎಂಬುವುದನ್ನು ಮನಗಂಡ ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಜನರ ಸ್ವಾವಲಂಬಿ ಬದುಕಿಗೆ ಹಲವು ಯೋಜನೆಗಳನ್ನು ರೂಪಿಸಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಳೆದ ಹತ್ತು ವರ್ಷದಲ್ಲಿ ಸುಮಾರು 20 ಕೋಟಿ ಜನರ ಆರ್ಥಿಕ ಸ್ಥಿತಿಯ ಸುಧಾರಣೆಗೆ ಮೋದಿ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಆಡಳಿತದಲ್ಲಿ ವಿಕಾಸಿತ ಭಾರತವಾಗಿ ಮುಂದುವರೆದಿದ್ದು, ಆರ್ಥಿಕ ಸ್ಥಿತಿಯಲ್ಲಿ ಮೂರನೇ ಸ್ಥಾನವನ್ನಗಳಿಸಿದೆ ಎಂದು ತಿಳಿಸಿದರು. 150 ವಿಮಾನ ನಿಲ್ದಾಣಗಳು, ಎಲೆಕ್ಟ್ರಿಕಲ್ ರೈಲು ಸಂಚಾರ, ಹೆದ್ದಾರಿಗಳ ನಿರ್ಮಾಣ ಸೇರಿದಂತೆ, ಹಲವಾರು ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮುನ್ನೆಡೆಸುವಲ್ಲಿ ಕೇಂದ್ರ ಸರ್ಕಾರ ಜನಪರ ಆಡಳಿತವನ್ನು ಮುಂದುವರಿಸಿದೆ. ಸೂರ್ಯ ಯೋಜನೆಯನ್ನು ಜಾರಿಗೆ ತಂದು ಪ್ರತಿಯೊಬ್ಬರು ಮನೆಯಲ್ಲಿಯೇ ವಿದ್ಯುತ್ ತಯಾರಿಸಿ ಉಪಯೋಗಿಸಿಕೊಳ್ಳುವ ಅನುಕೂಲ ಮತ್ತು ಹೆಚ್ಚುವರಿ ವಿದ್ಯುತನ್ನು ಸರ್ಕಾರಕ್ಕೆ ಮಾರುವ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಹೇಳಿದರು. ಮಾಜಿ ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ ಮಾತನಾಡಿ, ಕಳೆದ 20 ವರ್ಷಗಳ ಜನಸೇವೆಯಲ್ಲಿ ಆತ್ಮತೃಪ್ತಿಯನ್ನು ಹೊಂದಿದ್ದೇನೆ. ಜನರ ನಿರೀಕ್ಷೆಗೆ ತಕ್ಕಂತೆ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳನ್ನು ವಂಚನೆಯಾಗದಂತೆ ನಿಭಾಯಿಸಲಾಗಿದೆ. ಕೊಡವ ಹಾಕಿ ಉತ್ಸವಕ್ಕೆ, ಮಡಿಕೇರಿ-ಗೋಣಿಕೊಪ್ಪ ದಸರಾ, ಫೆಡರೇಷನ್‍ಗಳಿಗೆ, ಕಾಲೋನಿ ರಸ್ತೆಗಳಿಗೆ, ತಲಕಾವೇರಿ ಅಭಿವೃದ್ಧಿ ಮತ್ತು ಜಾತ್ರೆಗೆ ಸರ್ಕಾರದಿಂದ ಪ್ರಥಮವಾಗಿ ಅನುದಾನ ಒದಗಿಸಿಕೊಡಲಾಗಿದೆ. ಸಹಸ್ರಾರು ಅಡಚಣೆಗಳ ನಡೆಯುವೂ ಮಲ್ಲೂರು ಗ್ರಾಮಸ್ಥರು ಮಳೆಗಾಲದಲ್ಲಿ ಎದುರಿಸುತ್ತಿದ್ದ ಸಂಕಷ್ಟವನ್ನು ಮನಗೊಂಡು 9.5 ಕೋಟಿ ಅನುದಾನದಲ್ಲಿ ಸೇತುವೆ ನಿರ್ಮಾಣ ಕಾರ್ಯ ನಡೆದಿದೆ. ಜನರ ಬಹುದಿನಗಳ ಬೇಡಿಕೆ ಈ ಮೂಲಕ ಈಡೇರಿದೆ. ಇಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ತೃಪ್ತಿ ಇದೆ ಎಂದು ಹೇಳಿದರು. ವಿಧಾನಪರಿಷತ್ ಸದಸ್ಯ ಮಂಡೇಪಂಡ ಸುಜಾಕುಶಾಲಪ್ಪ ಮಾತನಾಡಿ, ದೇಶದ ಅಭಿವೃದ್ಧಿಯ ಕನಸು ಗ್ರಾಮ ಮಟ್ಟದಿಂದಲೇ ಸಕಾರಗೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆಯನ್ನು ರೂಪಿಸಿದೆ. ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಮಾಜಿ ಶಾಸಕ ಕೆ.ಜಿ.ಬೋಪಯ್ಯನವರ ಕಾರ್ಯವೈಖರಿ ಶ್ಲಾಘನೀಯವಾದದ್ದು ಎಂದು ಹೇಳಿದರು. ಮಲ್ಲರೂ ಗ್ರಾಮಾಭಿವೃದ್ಧಿ ಸಮಿತಿ ಪ್ರಧಾನ ಸಂಚಾಲಕ ಚಕ್ಕೇರ ಸೂರ್ಯ ಅಯ್ಯಪ್ಪ ಮಾತನಾಡಿ, ಮಳೆಗಾಲದಲ್ಲಿ ಒಂದು ತಿಂಗಳು ದ್ವೀಪವಾಗಿರುತ್ತಿದ್ದ ಗ್ರಾಮದ ಸಮಸ್ಯೆಯನ್ನು ಬಗೆಹರಿಸಲು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರ ಕಾಳಜಿಯೇ ಪ್ರಮುಖವಾಗಿದೆ. 1956ರಲ್ಲಿ ನಿರ್ಮಾಣವಾದ ಕಿರುಸೇತುವೆಗೆ ಮರು ಕಾಯಕಲ್ಪ ಒದಗಿಸಲು ಸಾಧ್ಯವಾಗಿರಲಿಲ್ಲ. ಮಳೆಗಾಲ ಸೇತುವೆಯ ಮೇಲೆ ನೀರು ನಿಂತು ಸಂಪರ್ಕ ಕಡಿತಗೊಳ್ಳುತ್ತಿತ್ತು. ಇದೀಗ ಸೇತುವೆ ಎತ್ತರಿಸಿರುವುದರಿಂದ ಸುತ್ತಲಿನ ಗ್ರಾಮಸ್ಥರ ಸಮಸ್ಯೆ ನಿವಾರಣೆಯಾಗಿದೆ ಎಂದು ಕೆ.ಜಿ.ಬೋಪಯ್ಯ ಅವರ ಪರಿಶ್ರಮದ ಫಲವನ್ನು ನೆನೆಪಿಸಿ ಶ್ಲಾಘೀಸಿದರು. ಬಾಳೆಲೆ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡಿದರು.ನಿಟ್ಟೂರು ಗ್ರಾ.ಪಂ. ಅಧ್ಯಕ್ಷೆ ಪಿ.ಎ.ಅಮ್ಮುಣಿ, ಉಪಾಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ಸದಸ್ಯರುಗಳಾದ ಪಡಿಜ್ಞಾರಂಡ ಕವಿತಾ, ಅಳಮೇಂಗಡ ಪವಿತಾ ರಮೇಶ್, ಬಾಳೆಲೆ ಸೆಂಟರ್ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಬಾಳೆಲೆ ಗ್ರಾ.ಪಂ. ಅಧಕ್ಷೆ ಕೊಕ್ಕೇಂಗಡ ಸ್ಮಿತಾ, ಒಲಂಪಿಯನ್ ಕರ್ನಲ್ ಬಾಳೇರ ಸುಬ್ರಮಣಿ, ಉಪನ್ಯಾಸಕಿ ನಳಿನಾಕ್ಷಿ ಮತ್ತು ನಿಟ್ಟೂರು, ಬಾಳೆಲೆ, ಮಲ್ಲೂರು ಗ್ರಾಮಸ್ಥರು ಸಂಭ್ರಮದಲ್ಲಿ ಭಾಗಿಯಾದರು.