







ಸೋಮವಾರಪೇಟೆ ಏ.16 NEWS DESK : ತಾಲ್ಲೂಕಿನ ಗೆಜ್ಜೆಹಣಕೋಡು ಗ್ರಾಮದ ಸೋಮೇಶ್ವರ ದೇವಾಲಯದ
ವಾರ್ಷಿಕ ಸುಗ್ಗಿ ಹಬ್ಬ ದೇವಾಲಯದ ಆವರಣದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಪೂಜೆಯ ಮೊದಲ ದಿನ ಗ್ರಾಮದ ಭಕ್ತಾಧಿಗಳೆಲ್ಲರೂ ಒಂದೆಡೆ ಸೇರಿ ಪರೇವು ( ಅನ್ನದಾಸೋಹ ) ನಡೆಸಿಕೊಟ್ಟರು. ಮರು ದಿನ ಸೋಮವಾರ ದೇವರಿಗೆ ರುದ್ರಾಭಿಷೇಕ, ಸಂಜೆ ಮೆರೆ ಬಸವಣ್ಣ ಮೂರ್ತಿಯನ್ನು ದೇವಾಲಯದ ಹೊರಗೆ ತಂದು ಪ್ರದಕ್ಷಿಣೆಯೊಂದಿಗೆ ದೊಡ್ಡ ಪೂಜೆ ಹಾಗೂ ಮಂಗಳಾರತಿ ನೆರವೇರಿಸಲಾಯಿತು. ಕೊನೆ ದಿನ ಮಂಗಳವಾರ ದೇವರಿಗೆ ಗಂಗಾ ಸ್ನಾನ ನೆರವೇರಿಸಲಾಯಿತು. ಇದೇ ಸಂದರ್ಭ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಲವು ಭಕ್ತರು ಕೆಂಡ ಸ್ನಾನದಲ್ಲಿ ಪಾಲ್ಗೊಂಡರು. ಬಳಿಕ ಕೆಂಡ ಕೊಂಡ ಪೂಜೆಯೊಂದಿಗೆ ಕೊಂಡ ಹಾಯುವುದು. ದೇವಾಲಯದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆಯ ನಂತರ ದೇವರಿಗೆ ಈಡುಗಾಯಿ ಹಾಕಿ ದೇವಾಲಯದ ಒಳಗೆ ಬರಮಾಡಿಕೊಂಡು ಭಕ್ತರಿಂದ ಹಣ್ಣು ಕಾಯಿ ಪೂಜೆ ನಡೆಯಿತು. ದೇವಾಲಯದ ಅರ್ಚಕ ಸಿದ್ದಲಿಂಗಸ್ವಾಮಿ ಹಾಗೂ ಊರಿನ ಹಿರಿಯ ಜಂಗಮರಾದ ಜಿ.ಇ.ತಮ್ಮಯ್ಯ ಅವರಿಂದ ಪೂಜೆ ನೆರವೇರಿತು. ಈ ಸಂದರ್ಭ ಗ್ರಾಮದ ಸೋಮೇಶ್ವರ ಯುವಕ ಸಂಘದ ಅಧ್ಯಕ್ಷ ಚಂದ್ರಕುಮಾರ್, ಕಾರ್ಯದರ್ಶಿ ಜಿ.ಎಂ.ಉದಯ, ಖಜಾಂಚಿ ಎಸ್.ದಯಾನಂದ, ಉಪಾಧ್ಯಕ್ಷ ಜಿ.ಟಿ.ಹಿರಣ್ಣಯ್ಯ, ಜಂಟಿ ಕಾರ್ಯದರ್ಶಿ ಶರತ್ ಮೊದಲಾದವರಿದ್ದರು. ಪೂಜಾ ಮುಕ್ತಾಯದ ಕೊನೆಯ ದಿನದಂದು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಈ ವರ್ಷದ ಪೂಜಾ ಸೇವೆಯನ್ನು ಗ್ರಾಮದ ಜಿ.ಎಂ.ರಾಜಶೇಖರ್ ಕುಟುಂಬಸ್ಥರು ನಡೆಸಿಕೊಟ್ಟರು. ದೇವತಾ ಪೂಜೋತ್ಸವಕ್ಕೂ ಮುನ್ನಾ ಗ್ರಾಮದ ನಿವಾಸಿಗಳೆಲ್ಲರೂ ಸಾಮೂಹಿಕವಾಗಿ ಗ್ರಾಮದ ಬೀದಿಗಳು ಹಾಗೂ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದರು.