






ಸೋಮವಾರಪೇಟೆ ಏ.16 NEWS DESK : ಶನಿವಾರಸಂತೆ ಹೋಬಳಿ ವ್ಯಾಪ್ತಿ ಯಲ್ಲಿರುವ ಶ್ರೀ ತಪೋಕ್ಷೇತ್ರ ಮನೆಹಳ್ಳಿ ಕ್ಷೇತ್ರದಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಶ್ರದ್ಧಾಭಕ್ತಿಯಿಂದ ಗುರುಸಿದ್ಧ ವೀರೇಶ್ವರ ಹಾಗೂ ಕ್ಷೇತ್ರ ನಾಥ ಶ್ರೀ ವೀರಭದ್ರ ಸ್ವಾಮಿಯ ಜಾತ್ರಾಮಹೋತ್ಸವ ನಡೆಯಿತು. ಶ್ರೀ ಗುರುಸಿದ್ಧವೀರೇಶ್ವರಸ್ವಾಮಿಯವರ ದಿವ್ಯ ಪ್ರಕಾಶದಲ್ಲಿ ಶ್ರೀ ಕ್ಷೇತ್ರಾಧ್ಯಕ್ಷರಾದ ಶ್ರೀ ಮಹಾಂತ ಶಿವಲಿಂಗಸ್ವಾಮಿಗಳವರ ಸದ್ವಿಚ್ಛೆಯ ಮೇರೆಗೆ ಮೂರು ದಿನಗಳ ಕಾಲ ನಡೆದ ಜಾತ್ರಾಮಹೋತ್ಸವದಲ್ಲಿ ಶ್ರೀ ಮದನಾಧಿ ಅನಘ ನಿರಂಜನ ಜಂಗಮ ಶ್ರೀ ಸ್ವಾಮಿಯವರ ಸೂರ್ಯ ಮಂಡಲೋತ್ಸವ, ಕ್ಷೇತ್ರನಾಥ ಶ್ರೀ ವೀರಭದ್ರೇಶ್ವರಸ್ವಾಮಿಯವರ ಪ್ರೀತ್ಯರ್ಥ ದುಗ್ಗಳ ಹಾಗೂ ಅಗ್ನಿಕೊಂಡೋತ್ಸವ ಸೇವೆ, ಚಂದ್ರಮಂಡಲೋತ್ಸವ, ಅಡ್ಡಪಲ್ಲಕ್ಕಿ ಉತ್ಸವ, ಶ್ರೀ ಪ್ರಸನ್ನ ತಪೋವನೇಶ್ವರಿ ಅಮ್ಮನವರ ಪ್ರೀತ್ಯರ್ಥ ಮುತ್ತೈದೆ ಸೇವೆ, ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ, ದಾಸೋಹ ಸೇವೆ, ಶ್ರೀಸ್ವಾಮಿಯವರ “ಪ್ರಾಕಾರ ಪಲ್ಲಕ್ಕಿ ಉತ್ಸವ” ದೊಂದಿಗೆ “ಮಹಾರಥೋತ್ಸವ” ಶ್ರೀ ವೃಷಭಲಿಂಗೇಶ್ವರಸ್ವಾಮಿಯವರ ಸನ್ನಿದಾನದಲ್ಲಿ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಶನಿವಾರಸಂತೆ ಹೋಬಳಿ ವ್ಯಾಪ್ತಿ ಯಲ್ಲಿರುವ ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠವು ಧಾರ್ಮಿಕತೆಯ ಶ್ರದ್ಧಾಕೇಂದ್ರವಾಗಿ ರೂಪುಗೊಂಡು ಶ್ರೀ ಗುರು ಸಿದ್ಧವೀರೇಶ್ವರ ಸ್ವಾಮಿಯವರ ಕೃಪಾ ವಿಶೇಷತೆಯಿಂದ ಗುಡಿ ಗೋಪುರಗಳು, ಪೂಜಾ ಕೈಂಕರ್ಯಗಳು, ದಾಸೋಹ ಕಾಯಕಗಳಿಂದ ಸಂಸ್ಕಾರಯುತ ಮೌಲ್ಯಗಳಿಂದ ತುಂಬಿಕೊಂಡು ಪ್ರತೀ ತಿಂಗಳೂ ಮಹಾಮಂಗಳಾರತಿ ನಡೆಸಿಕೊಂಡು ಸಾಗಿಬಂದು ಅಪಾರ ಭಕ್ತಸಾಗರವನ್ನು ಹೊಂದಿದೆ. ಸಾಮಾಜಿಕ ಸೇವಾ ಕಾರ್ಯಗಳಿಂದ ಭಕ್ತರ ಪಾಲಿಗೆ ಪುಣ್ಯಕ್ಷೇತ್ರವಾಗಿ ರೂಪುಗೊಂಡಿರುವ ಶ್ರೀ ಕ್ಷೇತ್ರ, ದಟ್ಟಾರಣ್ಯದಲ್ಲಿ ಹಗಲೂ ರಾತ್ರಿ ಕಳೆದು ಇದೀಗ ಭವ್ಯವಾದ ಮಠಮಂದಿರಗಳನ್ನು ನಿರ್ಮಿಸಲು ಮುಂದಾಗಿರುವ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿಗಳು ಮಠದ ಆಡಳಿತದ ಉಸ್ತುವಾರಿ ವಹಿಸಿದ್ದು, ಭಕ್ತರಿಗೆ ಮಾರ್ಗದರ್ಶನ ಮಾಡುತ್ತಾ ಕ್ಷೇತ್ರವನ್ನು ಸಮಾಜಮುಖಿಯನ್ನಾಗಿ ಮುನ್ನಡೆಸುತ್ತಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಜಾತ್ರೋತ್ಸವ, ಪೂಜಾ ಕೈಂಕರ್ಯಗಳು, ಅನ್ನದಾನಾದಿ ಸೇವೆಗಳೊಂದಿಗೆ ಗೋವುಗಳ ಸಂರಕ್ಷಣೆಯತ್ತಲೂ ಗಮನ ಹರಿಸಿರುವ ಸ್ವಾಮೀಜಿಗಳು, ಕೇವಲ ಬೋಧನೆಗೆ ಮಾತ್ರ ಸೀಮಿತವಾಗದೇ ಸಮಾಜಮುಖಿ ಕಾರ್ಯಗಳಲ್ಲಿ ಸ್ವತಃ ತೊಡಗಿಸಿಕೊಳ್ಳುವಿಕೆಗೆ ಶ್ರೀಗಳು ಮಾದರಿಯಾಗಿದ್ದಾರೆ. ಮನೆಹಳ್ಳಿಗೆ ಆಗಮಿಸಿದ ಯತಿಗಳಲ್ಲಿ ಶ್ರೀಗುರುಸಿದ್ದವೀರೇಶ್ವರರು ಮುಖ್ಯ ಶಕ್ತಿಯಾಗಿ ಕ್ಷೇತ್ರವನ್ನು ಜಾಗೃತಗೊಳಿಸಲು ಕಾರಣೀಭೂತರಾದರು.