






ಮಡಿಕೇರಿ ಏ.16 NEWS DESK : ರಾಜ್ಯ ಸರ್ಕಾರ ಇತ್ತೀಚೆಗೆ ಸಚಿವ ಸಂಪುಟದಲ್ಲಿ ಮಂಡಿಸಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿ ಗಣತಿ ವರದಿಯನ್ನು ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ಹಾಗೂ ತಾಲ್ಲೂಕು ಸಂಘಗಳು ತೀವ್ರವಾಗಿ ವಿರೋಧಿಸಿವೆ. ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ವಿ.ಜಿ.ಮೋಹನ್, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ ಹಾಗೂ ಕುಶಾಲನಗರ ತಾಲ್ಲೂಕು ಅಧ್ಯಕ್ಷ ಎಂ.ಕೆ.ದಿನೇಶ್ ಅವರುಗಳು ಸಚಿವ ಸಂಪುಟದಲ್ಲಿ ಮಂಡನೆಯಾದ ವರದಿ ಅವೈಜ್ಞಾನಿಕ ಸಮೀಕ್ಷೆಯಿಂದ ಕೂಡಿದ್ದು, ರಾಜ್ಯದಲ್ಲಿ ಒಕ್ಕಲಿಗರ ಸಂಖ್ಯೆ ಕೇವಲ 61 ಲಕ್ಷ ಎಂಬ ಅಂಶ ಶುದ್ಧ ಸುಳ್ಳು ಎಂದು ಟೀಕಿಸಿದ್ದಾರೆ. ನಾನು ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷನಾಗಿದ್ದೇನೆ, ಆದರೆ ನನ್ನ ಮನೆಗೆ ಯಾವುದೇ ಸಮೀಕ್ಷಾ ತಂಡ ಬಂದಿಲ್ಲ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ಪಡೆದಿಲ್ಲ. ನನ್ನನ್ನೇ ನಿರ್ಲಕ್ಷಿಸಿರುವಾಗ ಉಳಿದ ಒಕ್ಕಲಿಗರ ಮಾಹಿತಿಯನ್ನು ಸಮರ್ಪಕವಾಗಿ ಸಂಗ್ರಹಿಸಿರಲು ಹೇಗೆ ಸಾಧ್ಯ ಎಂದು ಎಸ್.ಎಂ.ಚಂಗಪ್ಪ ಪ್ರಶ್ನಿಸಿದ್ದಾರೆ. ವರದಿಯಲ್ಲಿ ಒಕ್ಕಲಿಗರನ್ನು 6ನೇ ಸ್ಥಾನದಲ್ಲಿ ಇರಿಸಲಾಗಿದೆ. ಆದರೆ ರಾಜ್ಯದ 12 ಜಿಲ್ಲೆಗಳಲ್ಲಿ ಒಕ್ಕಲಿಗರೇ ಬಹುಸಂಖ್ಯಾತರಾಗಿದ್ದಾರೆ. ಇದರ ಆಧಾರದ ಪ್ರಕಾರ ಒಕ್ಕಲಿಗರ ಸಂಖ್ಯೆ ದೊಡ್ಡ ಮಟ್ಟದಲ್ಲಿಯೇ ಇದೆ. ಸರ್ಕಾರ ಮಂಡಿಸಿರುವ ವರದಿ 10 ವರ್ಷಗಳ ಹಿಂದಿನ ಜಾತಿ ಗಣತಿ ಸಮೀಕ್ಷೆಯಾಗಿದೆ. 10 ವರ್ಷಗಳ ನಂತರದಲ್ಲಿ ಎಲ್ಲಾ ಜನಾಂಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಅವೈಜ್ಞಾನಿಕವಾಗಿರುವ 10 ವರ್ಷಗಳ ಹಿಂದಿನ ಸಮೀಕ್ಷೆ ಒಪ್ಪಲು ಸಾಧ್ಯವಿಲ್ಲ. ಈ ಸಮೀಕ್ಷೆ ಮೂಲಕ ಮೀಸಲಾತಿ ನೀಡುತ್ತೇವೆ ಎಂಬ ವಾದಕ್ಕೆ ನಮ್ಮ ವಿರೋಧವಿದೆ. ಜಾತಿ ಗಣತಿಯ ವರದಿ ಸಂಪೂರ್ಣ ದೋಷಪೂರಿತವಾಗಿದ್ದು, ತಕ್ಷಣ ಇದನ್ನು ಹಿಂಪಡೆಯಬೇಕು. ಒಂದು ವೇಳೆ ಸರ್ಕಾರ ಇದೇ ವರದಿಯನ್ನು ಜಾರಿಗೊಳಿಸಿದರೆ ರಾಜ್ಯವ್ಯಾಪಿ ಒಕ್ಕಲಿಗರ ಸಂಘ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಒಕ್ಕಲಿಗ ಜನಾಂಗದಲ್ಲಿ 114 ಉಪ ಪಂಗಡಗಳು ಇವೆ, ಅದನ್ನು ಪ್ರತ್ಯೇಕಿಸಲಾಗಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ಎಲ್ಲಾ ಉಪ ಪಂಗಡಗಳನ್ನು ಒಟ್ಟಿಗೆ ಸೇರಿಸಿದಾಗ ಸಮಾಜದ ಜನಸಂಖ್ಯೆ ಬಹಿರಂಗವಾಗುತ್ತದೆ. ಸಂಪುಟದಲ್ಲಿರುವ ಒಕ್ಕಲಿಗ ಸಚಿವರು ಹಾಗೂ ಶಾಸಕರು ಒಕ್ಕಲಿಗರಿಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಅವರುಗಳು ಒತ್ತಾಯಿಸಿದ್ದಾರೆ.