
ಸೋಮವಾರಪೇಟೆ NEWS DESK ಮೇ 4 : ಸೋಮವಾರಪೇಟೆ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಆರೋಪಿಸಿದೆ. ಭಾನುವಾರ ಸೋಮವಾರಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ಅವರು ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಸೂಕ್ತ ತನಿಖೆ ನಡೆಸಿ ಆಡಳಿತಾಧಿಕಾರಿಯನ್ನು ನೇಮಿಸಬೇಕು. ತಪ್ಪಿದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಸರ್ಕಾರಿ ಆಸ್ಪತ್ರೆಯ ಉಸ್ತುವಾರಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಹಾಗೂ ಆಡಳಿತ ವೈದ್ಯಾಧಿಕಾರಿ ವಹಿಸಿಕೊಂಡಿದ್ದಾರೆ. ಆದರೆ ಇವರುಗಳ ನಡುವಿನ ಹೊಂದಾಣಿಕೆಯ ಕೊರತೆಯಿಂದ ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು. ಆಸ್ಪತ್ರೆಗೆ ಬೇಕಾದ ಎಲ್ಲಾ ತರಹದ ಸೌಲಭ್ಯಗಳು ಹಾಗೂ ಅನುದಾನವನ್ನು ಸರ್ಕಾರ ಸಕಾಲದಲ್ಲಿ ಪೂರೈಕೆ ಮಾಡುತ್ತಿದೆ. ಆದರೂ ಸಮನ್ವಯತೆಯ ಕೊರತೆಯಿಂದ ಸದುಪಯೋಗವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸ್ಕಾö್ಯನಿಂಗ್ ಯಂತ್ರವಿದ್ದರೂ ತಜ್ಞ ವೈದ್ಯರಿಲ್ಲ, ಎಕ್ಸರೆ ಲ್ಯಾಬ್ ಕಾರ್ಯನಿರ್ವಹಿಸುತ್ತಿಲ್ಲ. ರಕ್ಷಾಸಮಿತಿಯಲ್ಲಿ ಹಣವಿದ್ದರೂ ಲೇಖನ ಸಾಮಾಗ್ರಿಗಳನ್ನು ಖರೀದಿ ಮಾಡುತ್ತಿಲ್ಲ. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯೇ ಐಸಿಯುನಲ್ಲಿದೆ. ಶಾಸಕರು ಕಾಳಜಿ ವಹಿಸಿ ಆಸ್ಪತ್ರೆ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಕೆ.ಎನ್.ದೀಪಕ್, ಖಜಾಂಚಿ ತ್ರಿಶೂಲ್ ಕಾರ್ಯಪ್ಪ, ಸಲಹೆಗಾರರಾದ ಜಿ.ಎಂ.ಹೂವಯ್ಯ ಹಾಗೂ ದೊಡ್ಡಮಳ್ತೆ ಉದಯ್ ಇದ್ದರು.










