

ಮಡಿಕೇರಿ NEWS DESK ಮೇ 14 : ಕೊಡಗು ಜಿಲ್ಲಾ ವಿಶೇಷ ಚೇತನರ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಮಹೇಶ್ವರ ಜೆ.ಎ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಡಿಕೇರಿ ನಗರಸಭೆಯ ಆವರಣದಲ್ಲಿರುವ ವಿಶೇಷ ಚೇತನರ ಸಂಘದ ಕಚೇರಿಯಲ್ಲಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ನಗರಸಭಾ ಅಧ್ಯಕ್ಷರಾದ ಕಲಾವತಿ ಅವರು ವಿಕಲಚೇತನರಿಗೆ ನಗರಸಭೆಯಿಂದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಉಪಾಧ್ಯಕ್ಷ ಮಹೇಶ್ ಜೈನಿ ಅವರು ಮಾತನಾಡಿ ವಿಶೇಷ ಚೇತನರ ಸಂಘಕ್ಕೆ ಕಟ್ಟಡ ಮತ್ತು ಕಚೇರಿಯ ಅಗತ್ಯವಿದ್ದು, ನಗರಸಭೆ ಮೂಲಕ ಸಹಾಯ ಮಾಡುವುದಾಗಿ ತಿಳಿಸಿದರು. ವಿಕಲಚೇತನರ ಸಬಲೀಕರಣ ಇಲಾಖೆಯ ಅಧಿಕಾರಿ ವಿಮಲಾ ದಿನೇಶ್ ಮಾತನಾಡಿ ಸಂಘವು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪದಾಧಿಕಾರಿಗಳ ಕಾರ್ಯವೈಖರಿ ಶ್ಲಾಘನೀಯವೆಂದರು. ವಿಕಲಚೇತನರ ಸಂಘದ ಕಾರ್ಯದರ್ಶಿ ಬಿ.ಎಂ.ತಿರುಮಲೇಶ್ವರ ಸ್ವಾಗತಿಸಿ, ಉಪಾಧ್ಯಕ್ಷ ರೇವಣ್ಣ ಕೆ.ಪಿ ವಂದಿಸಿದರು. ನಂತರ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಮಹೇಶ್ವರ ಜೆ.ಎ ಕಾರ್ಯದರ್ಶಿಯಾಗಿ ಬಿ.ಎಂ.ತಿರುಮಲೇಶ್ವರ, ಉಪಾಧ್ಯಕ್ಷರಾಗಿ ರೇವಣ್ಣ ಕೆ.ಪಿ, ಸಹ ಕಾರ್ಯದರ್ಶಿಯಾಗಿ ಶಿಲ್ಪ, ಖಜಾಂಚಿಯಾಗಿ ಹರೀಶ, ನಿರ್ದೇಶಕರುಗಳಾಗಿ ಹಸನ್ ಕೆ.ಎಂ, ವೀಣಾ ಎಂ.ಎನ್, ಹೇಮಾವತಿ ಪಿ.ಡಿ ಹಾಗೂ ಭಾಷಾ ಎಂ.ಕೆ ಮರು ಆಯ್ಕೆಯಾದರು. ನೂತನ ನಿರ್ದೇಶಕರುಗಳನ್ನಾಗಿ ಕವಿತಾ ಸಂದೀಪ, ರಾಮಚಂದ್ರ ಗೌಡ, ಮಂದಣ್ಣ ಎಂ.ಪಿ, ಸವಿತಾ ಎಂ.ಎನ್, ಜಿತೇಶ ಹಾಗೂ ಸುಬೇರಾ ಎಂ.ಎA ಅವರುಗಳನ್ನು ನೇಮಕ ಮಾಡಲಾಯಿತು.










