
ಮಡಿಕೇರಿ NEWS DESK ಮೇ 15 : ಕಾರ್ಪೋರೇಟ್ ಸಂಸ್ಥೆಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿರುವ ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿ ಮತ್ತು ಕೆಲಸದ ಅವಧಿಯನ್ನು 12 ಗಂಟೆಗೆೆ ವಿಸ್ತರಣೆ ಮಾಡಿರುವ ಕ್ರಮವನ್ನು ವಿರೋಧಿಸಿ ಮೇ 20 ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲವಾಗಿ ಕೊಡಗು ಜಿಲ್ಲೆಯಲ್ಲೂ ಪ್ರತಿಭಟನೆ ನಡೆಯಲಿದೆ ಎಂದು ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಕುಶಾಲನಗರ ಮತ್ತು ವಿರಾಜಪೇಟೆಯಲ್ಲಿ ಪ್ರತಿಭಟನೆ ನಡೆಯಲಿದ್ದು, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಕಾರ್ಮಿಕ ಸಂಘಟನೆಯಲ್ಲಿ ಸಂಯೋಜನೆಗೊAಡಿರುವ ಎಲ್ಲಾ ಸಂಘಟನೆಗಳು ಪಾಲ್ಲೊಳ್ಳಲಿವೆ ಎಂದರು. ಬ್ಯಾAಕ್, ಜೀವವಿಮಾ ನಿಗಮ, ಗ್ರಾ.ಪಂ, ಅಂಗನವಾಡಿ ನೌಕರರು, ಆಸ್ಪತ್ರೆಯ ಶುಚಿತ್ವ ವಿಭಾಗದ ಸಿಬ್ಬಂದಿಗಳು ಸೇರಿದಂತೆ ಕೇಂದ್ರದ ನೂತನ ಕಾರ್ಮಿಕ ನೀತಿಯಿಂದ ಅನ್ಯಾಯಕ್ಕೊಳಗಾದ ವಿವಿಧ ಕ್ಷೇತ್ರಗಳ ಎಲ್ಲಾ ಕಾರ್ಮಿಕ ವರ್ಗ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ಸುಮಾರು 50 ಕೋಟಿಯಷ್ಟು ದುಡಿಯುವ ವರ್ಗವಿದೆ. ಕಾರ್ಮಿಕರ ಹೋರಾಟದ ಫಲವಾಗಿ ಕೆಲಸದ ಸಮಯ 8 ಗಂಟೆ ಎಂದು ನಿಗಧಿಯಾಗಿತ್ತು. ಆದರೆ ಕೇಂದ್ರ ಸರ್ಕಾರ ಕಾರ್ಪೋರೇಟ್ ಸಂಸ್ಥೆಗಳಿಗೆ ಲಾಭ ಮಾಡಿಕೊಡಲು 12 ಗಂಟೆ ದುಡಿಯಬೇಕು ಎಂದು ಹೇಳುತ್ತಿದೆ. ಇದು ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುವ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆರೋಪಿಸಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಮಾತನಾಡಿ ರಾಷ್ಟçದ 14ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ ಎಂದರು. ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೋರೇಟ್ ಕಂಪನಿಗಳ ಲಾಭಕ್ಕಾಗಿ ವೇತನ ಸಂಹಿತೆಯಲ್ಲಿ 4 ಕಾನೂನು, ಕೈಗಾರಿಕಾ ಬಾಂಧವ್ಯ ಸಂಹಿತೆಯಲ್ಲಿ 3 ಕಾನೂನು, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಯಲ್ಲಿ 13 ಕಾನೂನು ಮತ್ತು ಸಾಮಾಜಿಕ ಭದ್ರತಾ ಸಂಹಿತೆಯಲ್ಲಿ 9 ಕಾನೂನು ಸೇರಿದಂತೆ ಒಟ್ಟು 29 ಕಾನೂನುಗಳನ್ನು 4 ಸಂಹಿತೆಗಳಲ್ಲಿ ರೂಪಿಸಲಾಗಿದೆ. ಇವುಗಳು ಕಾರ್ಮಿಕ ವಿರೋಧಿ ನಿಯಮಗಳಾಗಿವೆ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಮುನಾ, ಆಸ್ಪತ್ರೆ ನೌಕರರ ಸಂಘದ ಪ್ರಮುಖರಾದ ಅನುರಾಧ ಹಾಗೂ ಗ್ರಾ.ಪಂ ನೌಕರರ ಸಂಘದ ಪಿ.ವೆಂಕಟನಾಥ ಸ್ವಾಮಿ ಉಪಸ್ಥಿತರಿದ್ದರು. *ಬೇಡಿಕೆಗಳು* ಕೆಲಸದ ಅವಧಿ 8 ಗಂಟೆ ಖಾಯಂಗೊಳಿಸಬೇಕು, ಉದ್ಯೋಗವನ್ನು ಖಾಯಂಗೊಳಿಸಬೇಕು, ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ, ಮುಷ್ಕರದ ಹಕ್ಕನ್ನು ಒದಗಿಸಬೇಕು, ಪ್ರಸ್ತುತ ಸ್ಥಿತಿಗೆ ಅನುಗುಣವಾಗಿ ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರು ಮತ್ತು ಸ್ಕೀಂ ನೌಕರರಿಗೆ ರಾಷ್ಟçವ್ಯಾಪಿ ಅನ್ವಯವಾಗುವಂತೆ 26 ಸಾವಿರ ರೂ. ಹಾಗೂ ರಾಜ್ಯವ್ಯಾಪಿ 36 ಸಾವಿರ ರೂ. ಕನಿಷ್ಟ ವೇತನ ನಿಗದಿಪಡಿಸಬೇಕು.
ಕೃಷಿ, ತೋಟ ಸೇರಿದಂತೆ ಎಲ್ಲಾ ವಿಭಾಗದ ಕಾರ್ಮಿಕರಿಗೆ ಕನಿಷ್ಟ ಮಾಸಿಕ 9 ಸಾವಿರ ರೂ. ಪಿಂಚಣಿ ಹಾಗೂ ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸಬೇಕು, ಎನ್‌ಪಿಎಸ್ ಮತ್ತು ಯುಪಿಎಸ್ ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆಯನ್ನೆ ಮರು ಸ್ಥಾಪಿಸಬೇಕು, ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ಆಹಾರ, ಔಷಧಿಗಳು, ಕೃಷಿ ಸಾಮಗ್ರಿ ಮುಂತಾದ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ತೆಗೆಯಬೇಕು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೇಲಿನ ಕೇಂದ್ರೀಯ ಅಬಕಾರಿ ಸುಂಕ ಇಳಿಸಬೇಕು, ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಿ ಆಹಾರ ಭದ್ರತೆಯನ್ನು ಖಾತರಿಸಬೇಕು.
ವಿದ್ಯುತ್ ತಿದ್ದುಪಡಿ ಮಸೂದೆ-2022 ನ್ನು ಹಿಂದಕ್ಕೆ ಪಡೆಯಬೇಕು. ವಿದ್ಯುತ್ ಖಾಸಗೀಕರಣ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು, ಎಲ್ಲಾ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತರಿಗೆ ಕಾನೂನು ರೂಪಿಸಬೇಕು, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ವಿದ್ಯುತ್ ಮೇಲಿನ ಸಬ್ಸಿಡಿ ಹೆಚ್ಚಿಸಬೇಕು. ಸಮಗ್ರ ಸಾಲ ಮನ್ನಾ ಮತ್ತು ಬೆಳೆÉ ವಿಮೆ ಯೋಜನೆಗಳನ್ನು ಜಾರಿಗೆ ತರಬೇಕು. ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕಾಗಿಸಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಾರ್ಷಿಕ 200 ದಿನ ಕೆಲಸ, ದಿನಕ್ಕೆ 600 ರೂ. ಕೂಲಿ ನಿಗದಿಪಡಿಸಬೇಕು ಮತ್ತು ಇದನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು. ಎಲ್ಲರಿಗೂ ಉಚಿತ ಶಿಕ್ಷಣದ ಹಕ್ಕು , ಆರೋಗ್ಯದ ಹಕ್ಕು, ನೀರು ಮತ್ತು ನೈರ್ಮಲ್ಯದ ಹಕ್ಕು ಹಾಗೂ ಎಲ್ಲರಿಗೂ ವಸತಿ ಖಾತರಿಪಡಿಸಬೇಕು, ನೂತನ ಶಿಕ್ಷಣ ನೀತಿ 2020ನ್ನು ರದ್ದುಪಡಿಸಬೇಕು. ಅರಣ್ಯ ಹಕ್ಕು ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಟಾನ ಮಾಡಬೇಕು. ಅರಣ್ಯ ನಿವಾಸಿಗಳನ್ನು ತೆರವುಗೊಳಿಸಲು ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡುವ ತಿದ್ದುಪಡಿಗಳನ್ನು ಹಿಂದಕ್ಕೆ ಪಡೆಯಬೇಕು. ಸಂವಿಧಾನದ ಆಶಯಗಳ ಮೇಲಿನ ದಾಳಿ ನಿಲ್ಲಿಸಬೇಕು. ದಿನದ ಕೆಲಸದ ಅವಧಿ 12 ಗಂಟೆಗೆÉ ವಿಸ್ತರಣೆ ಹಾಗೂ ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರ ದುಡಿಮೆಗೆ ಅವಕಾಶ ನೀಡಿ ಕಾರ್ಖಾನೆ ಕಾಯ್ದೆಗೆ ಮಾಡಿರುವ ತಿದ್ದುಪಡಿ ಹಾಗೂ ನಿಶ್ಚಿತ ಕಾಲಾವಧಿ ಕಾರ್ಮಿಕ ನೇಮಕಕ್ಕೆ ಅವಕಾಶ ನೀಡುವ ಮಾದರಿ ಸ್ಥಾಯಿ ಆದೇಶಗಳ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕು. ರೈತರ ಒಪ್ಪಿಗೆ ಇಲ್ಲದೆ ಬಲವಂತದ ಭೂ ಸ್ವಾಧೀನ ಹಾಗೂ 3 ಕರಾಳ ಕೃಷಿ ಕಾಯ್ದೆ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕು. ಬೆಂಗಳೂರಿನಲ್ಲಿ ಪ್ರತಿಭಟನೆ ಮತ್ತು ಮೆರವಣಿಗೆಗೆ ಇರುವ ನಿರ್ಬಂಧವನ್ನು ಹಿಂಪಡೆಯಬೇಕು ಎನ್ನುವುದು ಸೇರಿದಂತೆ 22 ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆಯ ಸಂದರ್ಭ ಒತ್ತಾಯಿಸಲಾಗುವುದು ಎಂದು ಸಂಘಟನೆಯ ಖಜಾಂಚಿ ಎಂ.ಡಿ.ಕುಟ್ಟಪ್ಪ ತಿಳಿಸಿದರು.








