
ಮಡಿಕೇರಿ ಮೇ 16 NEWS DESK : ಅಭಿವೃದ್ಧಿ ಕಾಯ೯ಗಳ ಜತೆಗೇ ಪರಿಸರ ಸಂರಕ್ಷಣೆಯ ಕಾಳಜಿ ಕೂಡ ಇದ್ದಾಗ ಪ್ರಕೃತಿ ಮತ್ತು ಪ್ರಗತಿ ಜತೆಯಲ್ಲಿ ಸಾಗಲು ಸಾಧ್ಯವಿದೆ ಎಂದು ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಭಾಜನರಾದ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅಭಿಪ್ರಾಯಪಟ್ಟಿದ್ದಾರೆ. ನಗರದ ಪತ್ರಿಕಾಭವನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೊಡಗು ಪತ್ರಕತ೯ರ ಸಂಘದ ಸಹಯೋಗದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಪ್ರಕೃತಿಯನ್ನು ಉಳಿಸಿಕೊಳ್ಳದೇ ಹೋದಲ್ಲಿ ಮಾನವನ ಅಂತ್ಯ ಖಂಡಿತ ಎಂದು ಎಚ್ಚರಿಸಿದ ನಾಗೇಶ್ ಕಾಲೂರು. ಪ್ರಗತಿ ನೆಪದಲ್ಲಿ ಪರಿಸರ ನಾಶ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಕೃತಿ ಸಂರಕ್ಷಣೆ ಮತ್ತು ಪ್ರಗತಿ ಯೋಜನೆ ಜತೆಯಾಗಿ ಸಾಗುವಂಥ ಚಿಂತನೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು. ಗಂಗೆ ಕೂಡ ತಲಕಾವೇರಿ ಬಂದು ವಷ೯ಕ್ಕೊಮ್ಮೆ ಕಾವೇರಿಯಲ್ಲಿ ಮಿಂದು ಪುನೀತಳಾಗುತ್ತಾಳೆ ಎಂದು ಪುರಾಣದಲ್ಲಿ ಉಲ್ಲೇಖವಿದೆ. ಇಂಥ ಪವಿತ್ರ ಕಾವೇರಿಯ ತೀಥ೯ರೂಪದ ನೀರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತೀಯೋವ೯ರೂ ಕಾಳಜಿ ತೋರಬೇಕು, ಕಾವೇರಿ ಸಂರಕ್ಷಣೆಗೆ ನಮ್ಮಿಂದ ಏನಾಗಬೇಕು ಎಂಬ ಆತ್ಮಾವಲೋಕನಕ್ಕೆ ಪ್ರತೀಯೋವ೯ರೂ ಮುಂದಾಗಬೇಕೆಂದು ಹೇಳಿದ ಅವರು, ಕೊಡಗಿನ ಹಿರಿಯರು ದೇವರಕಾಡು ಮೂಲಕ ಪರಿಸರ ಕಾಳಜಿಯ ಅತೀ ಮುಖ್ಯ ಕೊಡುಗೆ ನೀಡಿದ್ದಾರೆ ಎಂಬುದನ್ನು ಮರೆಯಬಾರದು ಎಂದರು. ತಾನು ಬರೆದ ಕಾವೇರಿ ದರ್ಶನಂ ಕೃತಿಗೆ ದಿ.ಬಿ.ಎಸ್. ಗೋಪಾಲಕೖಷ್ಣ ದತ್ತಿ ಪ್ರಶಸ್ತಿ ಲಭಿಸಿದ್ದು, ಮಾನವನ ಆದಿಯಿಂದ ಅಂತ್ಯದವರೆಗೂ ಜೀವನದಲ್ಲಿ ಜಲದ ಮಹತ್ವವನ್ನು ಕಾವೇರಿ ದರ್ಶನಂ ನಲ್ಲಿ ಉಲ್ಲೇಖಿಸಿದ್ದೇನೆ ಎಂದೂ ನಾಗೇಶ್ ಕಾಲೂರು ನುಡಿದರು. ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದ ಕನಾ೯ಟಕ ಸಕಾ೯ರದ ಮಾಜಿ ಸಚಿವ ಎಂ.ಸಿ.ನಾಣಯ್ಯ, ಶಕ್ತಿ ಪತ್ರಿಕೆಯ ಸ್ಥಾಪಕರಾದ ಬಿ.ಎಸ್.ಗೋಪಾಲಕೃಷ್ಣ ಅವರ ಲೇಖನಿಯಲ್ಲಿ ತೀಕ್ಷತೆಯಿತ್ತು ಕೊಡಗಿಗೆ ಸಮಸ್ಯೆ ಎದುರಾದಾಗಲೆಲ್ಲಾ ಸಕಾ೯ರವನ್ನು ತನ್ನ ಹರಿತ ಬರವಣಿಗೆ ಮೂಲಕ ಎಚ್ಚರಿಕೆ ನೀಡುತ್ತಿದ್ದರು ಎಂದರಲ್ಲದೇ, ಬರವಣಿಗೆ ಮತ್ತು ಪತ್ರಿಕಾವರದಿಯ ಶೈಲಿಗೆ ಗೋಪಾಲಕೖಷ್ಣರು ನಾಡಿನ ಪತ್ರಿಕಾರಂಗದಲ್ಲಿಯೇ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಗೋಪಾಲಕೃಷ್ಣ ಅವರು ಹಾಕಿಕೊಟ್ಟ ಮಾಗ೯ದಶ೯ನ, ಪತ್ರಿಕೋದ್ಯಮದ ಆದಶ೯ದಿಂದಾಗಿಯೇ ಕೊಡಗಿನಲ್ಲಿ ಪತ್ರಿಕೋದ್ಯಮ ವ್ಯಾಪಾರವಾಗದೇ ಈ ಕ್ಷೇತ್ರ ಶುದ್ದವಾಗಿದೆ ಎಂದೂ ಎಂ.ಸಿ.ನಾಣಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ದತ್ತಿ ಪ್ರಶಸ್ತಿ ವಿತರಿಸಿದ ರಾಜಲಕ್ಷ್ಮಿ ಗೋಪಾಲಕೃಷ್ಣ ಮಾತನಾಡಿ, ಗೋಪಾಲಕೃಷ್ಣ ಅವರು ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆಗೆ ಆದ್ಯತೆ ನೀಡಿದ್ದರು. ಎಂಥಹದ್ದೇ ಸವಾಲು, ಸಂಕಷ್ಟ ಎದುರಾದಾಗಲೂ ಅಧಮ೯ ಮಾಗ೯ದತ್ತ ಮನಸ್ಸು ಹರಿಸಲಿಲ್ಲ. ಯಾರನ್ನೂ ಆಥಿ೯ಕ ಸಹಾಯಕ್ಕಾಗಿ ಅಂಗಲಾಚಲಿಲ್ಲ ಎಂದು ಸ್ಮರಿಸಿಕೊಂಡರು. ದತ್ತಿ ಪ್ರಶಸ್ತಿ ನೀಡಿದ್ದ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಮಾತನಾಡಿ, ಯಾವುದೇ ಕೆಲಸವನ್ನು ಮಾಡಿದರೂ ಅದನ್ನು ತನ್ಮಯತೆಯಿಂದ ಮಾಡು ಎಂಬ ಬುದ್ದನ ತತ್ವವನ್ನು ತನ್ನ ತಂದೆ ಗೋಪಾಲಕೃಷ್ಣ ಪರಿಪಾಲಿಸಿದ್ದರು. ಕಾಟಾಚಾರಕ್ಕಾಗಿ ಯಾವುದೇ ಲೇಖನ ಬರೆಯಲಿಲ್ಲ, ಯಾವುದೇ ಕೆಲಸವನ್ನೂ ಅವರು ಮಾಡಿದ್ದಿಲ್ಲ ಆ ರೀತಿಯ ಮಾದರಿ ವ್ಯಕ್ತಿತ್ವ ಅವರದ್ದಾಗಿತ್ತು ಎಂದರು. ಜೀವನದ ಆದಶ೯ಗಳಿಗೆ ಗೋಪಾಲಕೃಷ್ಣರು ಸದಾ ಮಾದರಿಯಾಗಿದ್ದಾರೆ ಎಂದೂ ಅನಂತಶಯನ ಹೇಳಿದರು. ಕೊಡಗು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಮಾತನಾಡಿ, ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ 10 ಕೃತಿಗಳನ್ನು ಸ್ವೀಕರಿಸಿದ್ದೆವು. ಈ ಪೈಕಿ ನಾಗೇಶ್ ಕಾಲೂರು ವಿರಚಿತ ಕಾವೇರಿ ದಶ೯ನ0 ಪ್ರಶಸ್ತಿಗೆ ಅಹ೯ವಾಗಿತ್ತು ಎಂದರಲ್ಲದೇ ಮೊದಲ ಬಾರಿಗೆ ಕಸಾಪದಿಂದ ಪುರುಷ ಲೇಖಕರ ಕೃತಿಗಳಿಗಾಗಿ ದತ್ತಿ ಪ್ರಶಸ್ತಿಯನ್ನು ವಿತರಿಸಲಾಗುತ್ತಿದೆ ಎಂದರು. ಗೋಪಾಲಕೃಷ್ಣ ಅವರ ಲೇಖನಗಳು ಅಂದಿನ ದಿನಗಳಿಗೆ ಮಾತ್ರ ಸೀಮಿತವಾಗದೇ ಎಲ್ಲಾ ಕಾಲಕ್ಕೂ ಅಹ೯ ಸಂದೇಶವನ್ನು ಸಾರುವಂಥದ್ದಾಗಿದೆ ಎಂದೂ ಕಾಮತ್ ಅಭಿಪ್ರಾಯಪಟ್ಟರು. ಗಡಿನಾಡ ಸಂಚಾರಿ ವಾರಪತ್ರಿಕೆಯ ಸಂಪಾದಕ ಟಿ.ಪಿ.ರಮೇಶ್ ಮಾತನಾಡಿ, ಗೋಪಾಲಕೃಷ್ಣ ಅವರು ಅಂದಿನ ಕಾಲಘಟ್ಟದಲ್ಲಿ ಅನೇಕ ಸವಾಲುಗಳನ್ನು, ಆಥಿ೯ಕ ಸಂಕಷ್ಟಗಳನ್ನು ಸಮಥ೯ವಾಗಿ ಎದುರಿಸಿದ್ದರು. ಶಕ್ತಿ ವಾರಪತ್ರಿಕೆ, ಸಂಧ್ಯಾ, ಚೇತನ, ನಂದಾದೀಪ ಮುಂತಾದ ಸಂಜೆ ಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳನ್ನು ಪ್ರಕಟಿಸಿದ್ದರೂ ಅವುಗಳು ಆಥಿ೯ಕ ಸಮಸ್ಯೆ ಎದುರಿಸಿದ್ದ ಹಿನ್ನಲೆ ಅವುಗಳ ಪ್ರಕಟಣೆ ಸ್ಥಗಿತಗೊಳಿಸಿದ್ದರು. ಕೊಡಗಿನಲ್ಲಿ 6 ದಶಕಗಳಿಂದ ಶಕ್ತಿ ಪ್ರಭಾವೀ ಪತ್ರಿಕೆಯಾಗಿ ಪ್ರಕಟವಾಗಬೇಕಿದ್ದರೆ ಗೋಪಾಲಕೃಷ್ಣರು ಆ ಪತ್ರಿಕೆಗೆ ಹಾಕಿಕೊಟ್ಟ ಭದ್ರವಾದ ಬುನಾದಿಯೇ ಕಾರಣ ಎಂದು ಅಭಿಪ್ರಾಯಪಟ್ಟರು. ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ರಾಜ್ಯಮಟ್ಟದ ಸಂಯುಕ್ತ ಕನಾ೯ಟಕ ಪತ್ರಿಕೆಗೆ ಸಂಪಾದರಾಗುವ ಮೂಲಕ ಕೊಡಗಿನ ಪತ್ರಕತ೯ರೋವ೯ರು ಮೊದಲ ಬಾರಿಗೆ ರಾಜ್ಯಮಟ್ಟದ ಪತ್ರಿಕೆಗೆ ಸಂಪಾದಕರಾದ ಹಿರಿಮೆಗೆ ಕಾರಣರಾದರು. ಆರ್.ಗುಂಡೂರಾವ್, ಬಿ.ಎ.ಹಸನಬ್ಬ ಅವರ ರಾಜಕೀಯ ಜೀವನದ ಪ್ರಾರಂಭಕ್ಕೂ ಗೋಪಾಲಕೖಷ್ಣ ಪರೋಕ್ಷವಾಗಿ ಕಾರಣರಾದರು ಎಂದರು. ಕಂಬದಕಡ ಅಣೆಕಟ್ಟು ವಿರೋಧಿ ಹೋರಾಟಕ್ಕೆ ಶಕ್ತಿ ಪತ್ರಿಕೆಯ ಮೂಲಕ ಗೋಪಾಲಕೖಷ್ಣ ವೇದಿಕೆ ಕಲ್ಪಿಸದೇ ಹೋಗಿದ್ದರೆ ಅಂದಿನ ಕಾಲದಲ್ಲಿ ಕೊಡಗಿಗೆ ಗಂಡಾಂತರ ಇತ್ತು ಎಂದೂ ಅನಿಲ್ ಹೇಳಿದರು. ಅನೇಕ ಬರಹಗಾರರಿಗೆ ಶಕ್ತಿ ಪತ್ರಿಕೋದ್ಯಮದ ಗರಡಿ ಮನೆಯಂತಾಗಲು ಗೋಪಾಲಕೃಷ್ಣ ಅವರು ಹಾಕಿಕೊಟ್ಟ ಆದಶ೯ ಯುತ ಪತ್ರಿಕೋದ್ಯಮದ ಸಂಸ್ಕಾರವೇ ಕಾರಣ ಎಂದೂ ಅನಿಲ್ ಅಭಿಪ್ರಾಯಪಟ್ಟರು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ವೇದಿಕೆಯಲ್ಲಿದ್ದ ಕಾಯ೯ಕ್ರಮದಲ್ಲಿ ಕಸಾಪ ಗೌರವ ಕಾಯ೯ದಶಿ೯ ಎಸ್.ಐ.ಮುನೀರ್ ಅಹಮ್ಮದ್ ಸ್ವಾಗತಿಸಿ, ಕೊಡಗು ಪತ್ರಕತ೯ರ ಸಂಘದ ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ ವಂದಿಸಿದರು. ಪುದಿಯನೆರವನ ರೇವತಿ ರಮೇಶ್ ಪ್ರಶಸ್ತಿ ವಿಜೇತರ ಪರಿಚಯ ಮಾಡಿದ ಸಮಾರಂಭದಲ್ಲಿ ಅಲೆಮಾಡ ಚಿತ್ರಾ ನಂಜಪ್ಪ ಮತ್ತು ವಂದನಾ ಪೊನ್ನಪ್ಪ ಅವರು ಗೋಪಾಲಕೃಷ್ಣ ಅವರಿಗೆ ಪ್ರಿಯವಾಗಿದ್ದ ಗಮಕಗಳನ್ನು ವಾಚಿಸಿದರು. ಇದೇ ಸಂದಭ೯ ದತ್ತಿ ಪ್ರಶಸ್ತಿ ನೀಡಿದ ಬಿ.ಜಿ. ಅನಂತಶಯನ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಮಡಿಕೇರಿ ರಸ್ತೆಗೆ ಗೋಪಾಲಕೃಷ್ಣರ ಹೆಸರಿಡಿ :: ಮಡಿಕೇರಿಯ ಪತ್ರಿಕಾಭವನದಿಂದ ಶಕ್ತಿ ಕಛೇರಿ ಮೂಲಕ ಸಾಗುವ ರಸ್ತೆಗೆ ದಿ.ಗೋಪಾಲಕೃಷ್ಣರ ಹೆಸರನ್ನು ನಗರಸಭೆ ನಾಮಕರಣ ಮಾಡುವಂತೆ ಕೊಡಗು ಪತ್ರಕತ೯ರ ಸಂಘ ಮನವಿ ಸಲ್ಲಿಸಲಿದೆ. ಇದರಿಂದಾಗಿ ನಾಡಿನ ಪತ್ರಿಕೋದ್ಯಮದ ಭೀಷ್ಮನ ಹೆಸರು ಇತಿಹಾಸದಲ್ಲಿ ಚಿರಸ್ಥಾಯಿಯಾಗಲಿದ್ದು, ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದ ಗಣನೀಯ ಸೇವೆಗಾಗಿ ಗೋಪಾಲಕೃಷ್ಣರ ಹೆಸರೂ ಚಿರಂತನವಾಗುವಂತೆ ಆಗಲಿದೆ. ಸಂಘದ ವತಿಯಿಂದ ನಗರಸಭೆಗೆ ಈ ನಿಟ್ಟಿನಲ್ಲಿ ಮನವಿ ಸಲ್ಲಿಸಲಾಗುತ್ತದೆ. :: ಅನಿಲ್ ಹೆಚ್.ಟಿ. ಕೊಡಗು ಪತ್ರಕರ್ತರ ಸಂಫದ ಅಧ್ಯಕ್ಷ :;










