ಮಡಿಕೇರಿ ಮೇ 24 NEWS DESK : ಸುನ್ನಿ ಯುವಜನ ಸಂಘ (ಎಸ್‍ವೈಎಸ್), ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ಮತ್ತು ಕೊಡಗು ಮುಸ್ಲಿಂ ಜಮಾಯತ್‍ನ ಸಂಯುಕ್ತಾಶ್ರಯದಲ್ಲಿ ಮೇ 26 ರಂದು ನೆಲ್ಲಿಹುದಿಕೇರಿಯಲ್ಲಿ ಅನಾರೋಗ್ಯ ಪೀಡಿತರ ನೆರವಿಗೆ ಪೂರಕವಾದ ‘ಸಾಂತ್ವನ ಕೇಂದ್ರ’ದ ಉದ್ಘಾಟನೆ ಮತ್ತು ರಕ್ತದಾನ ಶಿಬಿರ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಎಸ್‍ವೈಎಸ್ ನೆಲ್ಲಿಹುದಿಕೇರಿ ಯೂನಿಟ್‍ನ ಪ್ರಧಾನ ಕಾರ್ಯದರ್ಶಿ ಎಂ.ಎ.ಜುನೈದ್ ಮಾತನಾಡಿ, ಜಾತಿ ಮತ ಭೇದವಿಲ್ಲದೆ ಸರ್ವ ಸಮುದಾಯದಲ್ಲಿರುವ ಅನಾರೋಗ್ಯ ಪೀಡಿತರ ನೆರವಿಗೆ ಸ್ಪಂದಿಸುವ ದಿಸೆಯಲ್ಲಿ ಸಾಂತ್ವನ ಕೇಂದ್ರವನ್ನು ತೆರೆಯಲಾಗುತ್ತಿದೆ. ಈ ಕೇಂದ್ರದ ಮೂಲಕ ಅಗತ್ಯವಿರುವವರಿಗೆ ವೀಲ್ ಚೇರ್, ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ಆಕ್ಸಿಜನ್ ಸೌಲಭ್ಯ, ಕಮೋಡ್ ಚೇರ್, ವಾಕರ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು. ನೆಲ್ಲಿಹುದಿಕೇರಿಯ ಸಹಕಾರ ಸಂಘದ ಕಛೇರಿಯ ಬಳಿಯಲ್ಲಿ ಆರಂಭಗೊಳ್ಳಲಿರುವ ‘ಸಾಂತ್ವನ ಕೇಂದ್ರ’ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ಅನಾರೋಗ್ಯ ಪೀಡಿತರ ನೆರವಿಗೆ ಸದಾ ಸಿದ್ಧವಿರುತ್ತದೆ. ನೆರವಿನ ಅಗತ್ಯವಿರುವವರು ಮೊ.9535532765, 9482944786ನ್ನು ಸಂಪರ್ಕಿಸಬಹುದೆಂದು ತಿಳಿಸಿದರು. ಮೇ 26 ರಂದು ಸಂಜೆ 4 ಗಂಟೆಗೆ ಸಾಂತ್ವನ ಕೇಂದ್ರದ ಉದ್ಘಾಟನೆ ನಡೆಯಲಿದ್ದು, ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ಮಲಪ್ಪುರಂನ ಅಬ್ದುಲ್ ಮಜೀದ್ ಅಹ್ಸನಿ ಉಸ್ತಾದ್, ಕೂರ್ಗ್ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉಸ್ತಾದ್, ನೆಲ್ಲಿಹುದಿಕೇರಿಯ ಖತೀಬರಾದ ಅಹ್ಮದ್ ಕುಟ್ಟಿ ಬಾಖವಿ, ಸಯ್ಯಿದ್ ಕಲ್ಲರಕ್ಕಿಲ್ ತಂಙಳ್, ಸಯ್ಯಿದ್ ಮಹದಿ ತಂಙಳ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ರಕ್ತದಾನ ಶಿಬಿರ :: ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾಂತ್ವನ ಕೇಂದ್ರದ ಸಭಾಂಗಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನೆಲ್ಲಿಹುದಿಕೇರಿ ಎಸ್‍ವೈಎಸ್ ಯೂನಿಟ್‍ನ ಅಧ್ಯಕ್ಷರಾದ ಎಂ.ಎ.ರಫೀಕ್, ಕಾರ್ಯದರ್ಶಿ ಮೊಹಮ್ಮದ್ ಟಿ.ಹೆಚ್., ಸದಸ್ಯರುಗಳಾದ ಎಂ.ಎ.ರಶೀದ್, ಕೆ.ಎಂ.ಮುಸ್ತಫ ಉಪಸ್ಥಿತರಿದ್ದರು.











