ಮಡಿಕೇರಿ ಜೂ.6 NEWS DESK : ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ನಿಯಮಿತದಿಂದ 2025-26 ನೇ ಸಾಲಿನಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಗಳಡಿ ಸಹಾಯಧನ/ಸಾಲ-ಸೌಲಭ್ಯವನ್ನು ಪಡೆಯಲು ಇಚ್ಚಿಸುವವರು ಕಡ್ಡಾಯವಾಗಿ ಸೇವಾಸಿಂಧು ಪೋರ್ಟಲ್ ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ, 03 ಕೊನೆಯ ದಿನವಾಗಿದೆ. (ಅರಿವು ಶೈಕ್ಷಣಿಕ ಸಾಲ ಯೋಜನೆಗಳಿಗೆ ಕೊನೆಯ ದಿನಾಂಕ ಇರುವುದಿಲ್ಲ). ಅರ್ಜಿ ಸಲ್ಲಿಸಲು ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು. ನಿಗಮದ ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವವರು ಉಪ್ಪಾರ ಹಾಗೂ ಅದರ ಉಪಜಾತಿಗಳಿಗೆ ಸೇರಿರಬೇಕು. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರ ಕಡ್ಡಾಯವಾಗಿರುತ್ತದೆ. ವಯೋಮಿತಿ 18 ವರ್ಷಗಳಿಂದ 55 ವರ್ಷಗಳ ಮಿತಿಯಲ್ಲಿರಬೇಕು. ನಿಗಮದ/ ಸರ್ಕಾರದ ಯಾವುದಾದರೂ ಯೋಜನೆಗಳಡಿ ಈ ಹಿಂದೆ ಸೌಲಭ್ಯ ಪಡೆದಿರಬಾರದು. ಕುಟುಂಬದ ಒಬ್ಬರಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು. ಅರಿವು ಯೋಜನೆಯಡಿ ಅಭ್ಯರ್ಥಿಯ ವಯೋಮಿತಿ 18 ವರ್ಷಗಳಿಂದ 30 ವರ್ಷಗಳ ಮಿತಿಯಲ್ಲಿರಬೇಕು ವಾರ್ಷಿಕ ವರಮಾನದ ಮಿತಿ ರೂ.3.50 ಲಕ್ಷಗಳು. ಸ್ವಾವಲಂಬಿ ಸಾರಥಿ ಯೋಜನೆಯಡಿ ವಯೋಮಿತಿ 21 ವರ್ಷಗಳಿಂದ 45 ವರ್ಷಗಳ ಮಿತಿಯಲ್ಲಿರಬೇಕು. ವಿದೇಶಿ ವ್ಯಾಸಂಗ ಸಾಲ ಈ ಯೋಜನೆಯಡಿ ವಾರ್ಷಿಕ ವರಮಾನವು ರೂ.15 ಲಕ್ಷಗಳ ಮಿತಿಯಲ್ಲಿ ಇರಬೇಕು. ವಯೋಮಿತಿ: ವಿದ್ಯಾರ್ಥಿಯ ವಯಸ್ಸು 25 (ಸ್ನಾತಕೋತ್ತರ ಪದವೀಧರರಿಗೆ) ಮತ್ತು ಪಿಎಚ್‍ಡಿ ಪದವೀಧವಿದರರಿಗೆ 27 ವರ್ಷಗಳ ವಯೋಮಿತಿಯನ್ನು ನಿಗಧಿಪಡಿಸಲಾಗಿದೆ). ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯನ್ನು ತಮ್ಮ ಆಧಾರ್ ಸಂಖ್ಯೆಗೆ ಜೋಡಣೆ ಮಾಡಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ.98 ಸಾವಿರ ಮತ್ತು ನಗರ ಪ್ರದೇಶದವರಿಗೆ ರೂ.1.20 ಲಕ್ಷಗಳ ಮಿತಿಯೊಳಗಿರಬೇಕು. ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ.33 ರಷ್ಟು, ವಿಕಲ ಚೇತನರಿಗೆ ಶೇ.5 ರಷ್ಟು, ತೃತೀಯ ಲಿಂಗಿಗಳಿಗೆ ಶೇ.1 ರಷ್ಟು ಮೀಸಲಾತಿ ಇರಿಸಿದೆ. ಆನ್‍ಲೈನ್ ಮೂಲಕ ಅರ್ಜಿ ಸ್ವೀಕರಿಸುವ ನಿಗಮದ ಯೋಜನೆಗಳು ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಸ್ವಯಂ ಉದ್ಯೋಗ ನೇರ ಸಾಲ (ಬ್ಯಾಂಕ್‍ಗಳ ಸಹಯೋಗದೊಂದಿಗೆ), ಅರಿವು ಶೈಕ್ಷಣಿಕ ಸಾಲ ಯೋಜನೆ(ನೂತನ), ಅರಿವು ಶೈಕ್ಷಣಿಕ ಸಾಲ ಯೋಜನೆ (ನವೀಕರಣ), ವಿದೇಶಿ ವ್ಯಾಸಂಗ ಸಾಲ ಯೋಜನೆ. ಗಂಗಾ ಕಲ್ಯಾಣ ನೀರಾವರಿ ಯೋಜನೆ (ಕನಿಷ್ಠ1 ಎಕರೆ ಜಮೀನು ಹೊಂದಿರಬೇಕು), ಸ್ವಾವಲಂಬಿ ಸಾರಥಿ ಯೋಜನೆ. ಸ್ವಾತಂತ್ರ ಅಮೃತ ಮುನ್ನಡೆ ಯೋಜನೆ, ಈ ಯೋಜನೆಯಡಿ ಅರ್ಜಿಯನ್ನು www.kaushalkar.com ನಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್‍ನಲ್ಲಿರುವಂತೆ ಅರ್ಜಿದಾರರ ಹೆಸರು, ವಿಳಾಸ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳಲ್ಲಿನ ಹೆಸರು, ವಿಳಾಸ ಮತ್ತು ಬ್ಯಾಂಕ್ ಪಾಸ್ ಪುಸ್ತಕಗಳಲ್ಲಿನ ಹೆಸರು ಕಡ್ಡಾಯವಾಗಿ ತಾಳೆಯಾಗಬೇಕು. ಬೆಂಗಳೂರು–ಒನ್ /ಕರ್ನಾಟಕ-ಒನ್/ ಅಟಲ್-ಜಿ ಜನ ಸ್ನೇಹಿ ಕೇಂದ್ರ ಮತ್ತು ನಾಗರಿಕ ಸೇವಾ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಸೇವಾಸಿಂಧು ಪೋರ್ಟಲ್ ನಡಿ ಅರ್ಜಿ ಸಲ್ಲಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಯನ್ನು ನಿಗಮದ ವೆಬ್‍ಸೈಟ್ http://upparadevelopment.karnataka.gov.in ರಲ್ಲಿ ಅಥವಾ ನಿಗಮದ ಕೇಂದ್ರ ಕಚೇರಿ ದೂ.ಸಂ.080-22252555 ಯಿಂದ ಪಡೆಯಬಹುದಾಗಿದೆ. ಜಿಲ್ಲೆಗಳಲ್ಲಿ ನಿಗಮದ ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಚೇರಿಗಳಲ್ಲಿ ದೂ.ಸಂ.08272-221656 ಮೂಲಕ ಸಂಪರ್ಕಿಸಬಹುದು. 2023-24 ಮತ್ತು 2024-25ನೇ ಸಾಲುಗಳಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದೇ ಇರುವ ಅರ್ಜಿದಾರರು ಮತ್ತೊಮ್ಮೆ ಅರ್ಜಿಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಅಂತಹ ಅರ್ಜಿದಾರರನ್ನು ಪ್ರಸ್ತುತ ಸಾಲಿಗೂ ಸಹ ಪರಿಗಣಿಸಲಾಗುವುದು. 2023-24 ಮತ್ತು 2024-25ನೇ ಸಾಲುಗಳಲ್ಲಿ ಅರ್ಜಿ ಸಲ್ಲಿಸಿರುವ ಯೋಜನೆಯನ್ನು ಹೊರತು ಪಡಿಸಿ ಉಳಿದ ಯೋಜನೆಗಳಿಗೆ ಪ್ರಸ್ತುತ ಅರ್ಜಿಸಲ್ಲಿಸಬಹುದಾಗಿದೆ. ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿಗಳನ್ನು ಸಲ್ಲಿಸಲು ಜು.3 ಕೊನೆಯ ದಿನವಾಗಿದೆ. ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.











