
ಮಡಿಕೇರಿ ಜೂ.10 NEWS DESK : ಪ್ರಧಾನಮಂತ್ರಿಗಳಾಗಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ಬಳಿಕ ಕೈಗೊಂಡ ದೂರದೃಷ್ಟಿಯ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನಮಾನ ಹೆಚ್ಚಿರುವುದಾಗಿ ಬಿಜೆಪಿ ಮುಖಂಡ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ. ಮಡಿಕೇರಿಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರು ರಾಷ್ಟ್ರದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ ಪರಿಣಾಮ, ರಾಷ್ಟ್ರವ್ಯಾಪಿ ಗುಣಮಟ್ಟದ ರಸ್ತೆಗಳ ನಿರ್ಮಾಣವಾಗಿದೆ. ಸುಲಲಿತ ಸಂಚಾರದಿಂದ ಇಂಧನ ಉಳಿತಾಯವು ಸಾಧ್ಯವಾಗಿದೆ ಎಂದರು. ಜನಪರವಾದ ಹತ್ತಾರು ಯೋಜನೆಗಳನ್ನು ಜಾರಿಗೆ ತಂದ ಮೋದಿಯವರು, ಸರ್ಕಾರಿ ಸೌಲಭ್ಯಗಳ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಹಾಕುವ ಕ್ರಾಂತಿಕಾರಕ ಚಿಂತನೆಯನ್ನು ಜಾರಿಗೆ ತರುವ ಮೂಲಕ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿದ್ದಾರೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಯೋಜನೆಗಳ ಹಣ ಮಧ್ಯವರ್ತಿಗಳ ಮೂಲಕ ಸೋರಿ ಹೋಗಿ ಉದ್ದೇಶಿತ ಗುರಿ ಸಾಧನೆ ಸಾಧ್ಯವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯಕ್ಕೂ ಕೇಂದ್ರದ ಬಿಜೆಪಿ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, ರಸ್ತೆ, ರೈಲ್ವೆ, ನಗರಾಭಿವೃದ್ಧಿ, ಇಂಧನ ಹಾಗೂ ಇತರೆ ಕ್ಷೇತ್ರಗಳಲ್ಲಿ 5 ಲಕ್ಷ ಕೋಟಿಗಳಿಗೂ ಹೆಚ್ಚಿನ ಹೂಡಿಕೆ ಮಾಡಿದೆ. 1,860 ಕಿ.ಮೀ ರಾಷ್ಟ್ರೀಯ ಹೆದ್ದಾರಿಯನ್ನು ರಾಜ್ಯದಲ್ಲಿ ನಿರ್ಮಿಸಿದೆ. ಬೆಂಗಳೂರು ಮೈಸೂರು ಎಕ್ಸ್‍ಪ್ರೆಸ್ ಹೆದ್ದಾರಿಗೆ 8,408 ಕೋಟಿಯನ್ನು ವಿನಿಯೋಗಿಸಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಮುಖರಾದ ಕಿಲನ್ ಗಣಪತಿ ಹಾಗೂ ಚಲನ್‍ಕುಮಾರ್ ಉಪಸ್ಥಿತರಿದ್ದರು.









