

ಮಡಿಕೇರಿ ಜೂ.25 NEWS DESK : ರಾಜ್ಯ ಕಾಂಗ್ರೆಸ್ ಸರ್ಕಾರ ಸಂಘ ಪರಿವಾರದ ನಿಯಂತ್ರಣದಲ್ಲಿದ್ದು, ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ವಿಫಲವಾಗಿದೆ. ಮೃದು ಹಿಂದುತ್ವದ ಧೋರಣೆಯ ಮೂಲಕ ಅಲ್ಪಸಂಖ್ಯಾತರಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕೊಡಗು ಜಿಲ್ಲಾ ಘಟಕ ಆರೋಪಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಅವರು ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವುದು ಸೂಕ್ತವೆಂದು ಲೇವಡಿ ಮಾಡಿದರು. ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ಎ.ಬಿ.ರಮೇಶ್ ಬಂಡಿ ಸಿದ್ದೇಗೌಡನ ಅವರು ನೀಡಿರುವ ಮುಸ್ಲಿಂ ವಿರೋಧಿ ಹೇಳಿಕೆಯನ್ನು ಎಸ್‍ಡಿಪಿಐ ತೀವ್ರವಾಗಿ ಖಂಡಿಸುತ್ತದೆ ಹಾಗೂ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸುತ್ತದೆ. ಕರ್ನಾಟಕದ 2023ರ ವಿಧಾನಸಭಾ ಚುಣಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಅತ್ಯಂತ ಹೆಚ್ಚಿನ ಅಂತರದಿಂದ ಗೆಲ್ಲಿಸಿದ್ದಾರೆ. 135 ಕ್ಷೇತ್ರಗಳಲ್ಲಿ ಗೆಲವು ಸಾಧಿಸುವುದರ ಮೂಲಕ ಪೂರ್ಣ ಬಹುಮತದ ಸರಕಾರ ರಚಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಮುಂದೆ ನಡೆದ ಉಪ ಚುಣಾವಣೆಯಲ್ಲಿ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ತನ್ನ ಶಾಸಕ ಬಲವನ್ನು 138ಕ್ಕೆ ಏರಿಸಿಕೊಂಡಿತು. ಈ ಎಲ್ಲಾ ಗೆಲುವಿನಲ್ಲಿ ಶೇ.99 ರಷ್ಟು ಮುಸಲ್ಮಾನರ ಮತಗಳು ಕ್ರೋಢೀಕರಣಗೊಂಡಿವೆ. ಆದರೆ ಇಂದು ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಮುಸ್ಲಿಂ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕರ್ನಾಟಕ ವಿಧಾನಸಭಾ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದೊಳಗೆ ಸಂಘ ಪರಿವಾರದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರದಲ್ಲಿ ಇದ್ದಾರೆ. ಇವರಿಂದ ಪಕ್ಷಕ್ಕೆ ಅಪಾಯವಿದೆ, ಇವರುಗಳನ್ನು ಪಕ್ಷದಿಂದ ಹೊರಗೆ ಹಾಕಬೇಕು ಎನ್ನುವ ಅಭಿಪ್ರಾಯಗಳನ್ನು ಹೇಳಿಕೆಗಳಿಗೆ ಸೀಮಿತಗೊಳಿಸಿರುವುದರಿಂದ ಕಾಂಗ್ರೆಸ್ ಶಾಸಕರು ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡುವಲ್ಲಿ ಸಂಘ ಪರಿವಾರವನ್ನು ಮೀರಿಸುತ್ತಿದ್ದಾರೆ ಎಂದು ಎಂದು ಆರೋಪಿಸಿದರು.
ಶ್ರೀರಂಗಪಟ್ಟಣದ ಶಾಸಕ ಎ.ಬಿ.ರಮೇಶ್ ಬಂಡಿ ಸಿದ್ದೇಗೌಡ ಅವರು ಸರ್ಕಾರಿ ಭೂಮಿಯನ್ನು ಬಗರ್ ಹುಕುಂ ಸಾಗುವಳಿ ಅರ್ಜಿಯ ಅಡಿಯಲ್ಲಿ ಮುಸಲ್ಮಾನರಿಗೆ ನೀಡಬಾರದೆಂದು ಬಹಿರಂಗವಾಗಿ ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ. ಇದು ಸರ್ಕಾರದ ಮೃದು ಹಿಂದುತ್ವ ಧೋರಣೆಯ ಪರಿಣಾಮವಾಗಿದ್ದು, ಎ.ಬಿ.ರಮೇಶ್ ಅವರನ್ನು ತಕ್ಷಣ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಅಮೀನ್ ಮೊಹಿಸಿನ್ ಒತ್ತಾಯಿಸಿದರು.
ಮಂಗಳೂರಿನ ಕ್ರಿಕೆಟ್ ಮೈದಾನದಲ್ಲಿ ನಡೆದ ಕೊಲೆ ಮತ್ತು ಘರ್ಷಣೆಯ ಪ್ರಕರಣದ ಕುರಿತು ಗೃಹ ಸಚಿವರು ಹಿಂದುತ್ವ ಪ್ರೇರಿತ ಹೇಳಿಕೆ ನೀಡಿದ್ದಾರೆ. ರದ್ದುಗೊಂಡಿರುವ ಹಿಜಾಬ್ ಮತ್ತು ಶೇ.4 ಮೀಸಲಾತಿ ಮರುಸ್ಥಾಪನೆಗೆ ಸರ್ಕಾರ ನಿರ್ಲಕ್ಷ ತೋರುತ್ತಿದೆ. ಈದ್ (ಕುರಾಣಿ) ಹೆಸರಿನಲ್ಲಿ ಸರ್ಕಾರ ಅನವಶ್ಯಕ ತೊಂದರೆ ನೀಡುತ್ತಿದೆ. ಈಗಾಗಲೇ ನಡೆಸಿದ ಜಾತಿ ಜನಗಣತಿ ವರದಿಯ ಅಂಶಗಳ ಅನುಸಾರ ಉದ್ಯೋಗ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಮೀಸಲಾತಿ ಪ್ರಕಟಿಸಿ ಅಭಿವೃದ್ಧಿ ಪರ ಚಿಂತನೆ ಮಾಡಬೇಕಾದ ಸರ್ಕಾರ ಯಾರದ್ದೋ ಒತ್ತಡಕ್ಕೆ ಮಣಿದು ಮತ್ತೊಮ್ಮೆ ಜಾತಿ ಜನಗಣತಿ ನಡೆಸಲು ಮುಂದಾಗಿದೆ. ಇದರ ಹಿಂದೆ ಪ್ರಭಾವಿಗಳ ಲಾಬಿ ನಡೆದಿರುವ ಸಂಶಯವಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಟೀಕಿಸಿದರು. ಮರು ಜಾತಿ ಜನಗಣತಿ ಪ್ರಕ್ರಿಯೆಯನ್ನು ಸರ್ಕಾರ ತಕ್ಷಣ ಕೈಬಿಡಬೇಕು. ಈಗಾಗಲೇ ಪೂರ್ಣಗೊಂಡಿರುವ ವರದಿ ಆಧಾರಿಸಿ ಸೌಲಭ್ಯಗಳ ಹಂಚಿಕೆ ಮುಂದುವರಿಸಬೇಕು. ಎಸ್‍ಸಿ ಎಸ್‍ಟಿಗಳ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆ ಸಂದರ್ಭ ಘೋಷಿಸಿದ್ದ ಭರವಸೆಗಳಲ್ಲಿ ಇಲ್ಲಿಯವರೆಗೆ ಶೇ.10 ರಷ್ಟು ಮಾತ್ರ ಪೂರೈಸಿದೆ. ಆಡಳಿತ ನಡೆಸುವ ಸಂದರ್ಭ ದಿಟ್ಟ ಹೆಜ್ಜೆ ಇಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗುತ್ತಿಲ್ಲ. ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಮೃದು ಹಿಂದುತ್ವದ ಧೋರಣೆಯನ್ನು ಅನುಸರಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಮುಂಬುರುವ ಚುನಾವಣೆಯಲ್ಲಿ ಮುಸಲ್ಮಾನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅಮೀನ್ ಮೊಹಿಸಿನ್ ತಿಳಿಸಿದರು. ಎಸ್‍ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸುಂಟಿಕೊಪ್ಪ ಮಾತನಾಡಿ ಕಾಂಗ್ರೆಸ್ ಶಾಸಕರಿಂದಲೇ ಮುಸಲ್ಮಾನರಿಗೆ ಅಪಮಾನವಾಗುತ್ತಿದ್ದರೂ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಯಾಕೆ ಎಂದು ಪ್ರಶ್ನಿಸಿದರು. ಮುಸಲ್ಮಾನರನ್ನು ಅವಹೇಳನ ಮಾಡಿರುವ ಶ್ರೀರಂಗಪಟ್ಟಣದ ಶಾಸಕ ಎ.ಬಿ.ರಮೇಶ್ ಬಂಡಿ ಸಿದ್ದೇಗೌಡ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಎಲ್ಲಾ ಪದಾಧಿಕಾರಿಗಳು ಪಕ್ಷದ ಹುದ್ದೆಯನ್ನು ತ್ಯಜಿಸಬೇಕೆಂದು ಒತ್ತಾಯಿಸಿದರು. ಎಸ್‍ಡಿಪಿಐ ಉಪಾಧ್ಯಕ್ಷೆ ನಫೀಸಾ ಅಕ್ಬರ್ ಮಾತನಾಡಿ ಮುಸ್ಲಿಂ ಮೀಸಲಾತಿ ಕುರಿತು ಸರ್ಕಾರ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಕಾರ್ಯದರ್ಶಿ ಬಷೀರ್ ಅಹಮ್ಮದ್ ಮಾತನಾಡಿ ಮಳೆಗಾಲದಲ್ಲಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಮಡಿಕೇರಿ ನಗರಸಭೆ ಸಂಪೂರ್ಣವಾಗಿ ವಿಫಲವಾಗಿದೆ. ನಗರಸಭಾ ಅಧ್ಯಕ್ಷರ ಬದಲಿಗೆ ಉಪಾಧ್ಯಕ್ಷರು ಅಧಿಕಾರ ಚಲಾಯಿಸುತ್ತಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಬಡವರಿಗೆ ನಿವೇಶನ ನೀಡದೆ ಕಾನೂನನ್ನು ಗಾಳಿಗೆ ತೂರಿ ಶ್ರೀಮಂತರಿಗೆ ಸಹಕಾರ ನೀಡಲಾಗುತ್ತಿದೆ. ನಗರೋತ್ಥಾನದ ಕಾಮಗಾರಿ ನಡೆಯುತ್ತಿಲ್ಲ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್‍ಡಿಪಿಐ ಸದಸ್ಯರಾದ ಮೇರಿ ವೇಗಸ್ ಹಾಗೂ ಜಲೀಲ್ ಉಪಸ್ಥಿತರಿದ್ದರು.












