ಕಾರ್ಕಳ ಜು.12 NEWS DESK : ಕಾರ್ಕಳ ಕ್ರಿಯೇಟಿವ್ ಪಿ.ಯು ಕಾಲೇಜಿನಲ್ಲಿ 6/8 ಕರ್ನಾಟಕ ಎನ್.ಸಿ.ಸಿ ಉಪನೌಕಾ ಘಟಕವನ್ನು ಉದ್ಘಾಟಿಸಲಾಯಿತು. 6 ಕರ್ನಾಟಕ ಎನ್.ಸಿ.ಸಿ ನೌಕಾ ಘಟಕ ಉಡುಪಿಯ ಕಮಾಂಡಿಂಗ್ ಆಫೀಸರ್ ಕಮಾಂಡರ್ ಅಶ್ವಿನ್ ಎಂ. ರಾವ್ ಅವರು ಘಟಕವನ್ನು ಉದ್ಘಾಟಿಸಿ ಮಾತನಾಡಿ, ಎನ್.ಸಿ.ಸಿಯ ಶ್ರೇಷ್ಠತೆ, ಅದರಲ್ಲಿರುವ ಅವಕಾಶಗಳು, ಭಾರತೀಯ ರಕ್ಷಣಾ ಪಡೆಯೊಂದಿಗಿನ ನಂಟು, ಯುವಜನತೆಯ ಪಾತ್ರ ಮತ್ತು ದೇಶದ ಭವಿಷ್ಯ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹ ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ಎನ್.ಸಿ.ಸಿ ಯ ಶಿಸ್ತು, ಸಮಯ ಪಾಲನೆ, ನಾಯಕತ್ವ ಹಾಗೂ ದೇಶಪ್ರೇಮದ ಕುರಿತು ಉಲ್ಲೇಖಿಸಿ, “ಯುವಜನತೆ ರಾಷ್ಟ್ರದ ಭವಿಷ್ಯ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ದೇಶ ಪ್ರಗತಿಯ ಮಾರ್ಗದಲ್ಲಿ ಸಾಗುತ್ತದೆ” ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಕಮಾಂಡರ್ ಎಂ.ಎ.ಮುಲ್ತಾನಿ, ಪಿ.ಐ.ಸ್ಟಾಫ್ ವರ್ಗದವರು, ಕಾಲೇಜು ಎನ್.ಸಿ.ಸಿ ನೌಕಾ ಘಟಕದ ಸಿ.ಟಿ.ಒ ಆಗಿರುವ ಆಂಗ್ಲ ಭಾಷಾ ಉಪನ್ಯಾಸಕ ಮಹೇಶ್ ಆರ್. ಶೆಣೈ ಕೆ. ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕಿ ಸುದೀಕ್ಷಾ ಎಸ್. ಪೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.











