ನಾಪೋಕ್ಲು ಜು.14 NEWS DESK : ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಡಿಕೇರಿ ವಿಧಾನಸಭೆ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಹೇಳಿದರು. ಹೊದ್ದೂರು ಗ್ರಾಮ ಪಂಚಾಯಿತಿಯ ಪಾಲೆಮಾಡು ಕಾನ್ಸಿರಾಂ ನಗರದಲ್ಲಿ ಸುಮಾರು 2.10 ಕೋಟಿರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಪಾಲೆಮಾಡುವಿನಲ್ಲಿ ಸುಮಾರು 230 ಕುಟುಂಬಗಳಿಗೆ 9.00 ಸೆಂಟ್ ನ ಅಳತೆಯ ಮನೆ ನಿವೇಶನದ ಹಕ್ಕು ಪತ್ರವನ್ನು ವಿತರಿಸಿದ್ದು ಖುಷಿ ತಂದಿದೆ. ಅಧಿಕಾರಿಗಳ ಮಟ್ಟದಲ್ಲಿ ಗ್ರಾಮ ಪಂಚಾಯಿತಿಯ ಕಾರ್ಯ ಶ್ಲಾಘನೀಯ ಎಂದರು. ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯರಹಿತವಾಗಿ ಜನರ ಸಮಸ್ಯೆಗಳನ್ನು ಬಗೆಹರಿಸುವುದು ಅತೀ ಮುಖ್ಯ ಎಂದ ಅವರು, ಪಾಲೆಮಾಡು ಕಾನ್ಸಿರಾಂ ನಗರದಲ್ಲಿ ಇನ್ನು ಅಂಬೇಡ್ಕರ್ ಭವನವನ್ನು ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಸಮಾಜ ಕಲ್ಯಾಣ ಇಲಾಖೆಯ ರಾಜ್ಯದ ಸಚಿವರನ್ನು ಮತ್ತು ಮನೆ ಹಕ್ಕು ಪತ್ರ ನೀಡಲು ಸಹಕರಿಸಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರನ್ನು ಸ್ಮರಿಸಿಕೊಂಡ ಶಾಸಕರು ಜಿಲ್ಲೆಯಾದ್ಯಂತ ಬಡ ಜನರ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡಲು ಮುಂದಿನ ದಿನಗಳಲ್ಲಿ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಬಡವರ ಪರವಾದ ಕಾನೂನಾತ್ಮಕ ಹೋರಾಟಗಳು ಮತ್ತಷ್ಟು ನಡೆಯಲಿ ಎಂದರು. ಹೊದ್ದೂರು ಗ್ರಾ.ಪಂ ಅಧ್ಯಕ್ಷ ಹೆಚ್.ಎ.ಹಂಸ ಮಾತನಾಡಿ, ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಲ್ಲಿ ಶಾಸಕರು ಬೆನ್ನೆಲುಬಾಗಿ ನಿಂತಿದ್ದಾರೆ. ಪಾಲೆಮಾಡುವಿಗೆ ಮೊದಲ ಸರ್ಕಾರಿ ಬಸ್ಸು, ಹಕ್ಕು ಪತ್ರವನ್ನು ನೀಡಿರುವುದು, ನೂತನವಾದ ಕಾಂಕ್ರೀಟ್ ರಸ್ತೆ ಹೀಗೆ ಅಭಿವೃದ್ಧಿ ಕಾರ್ಯಗಳಲ್ಲಿ ಶಾಸಕರು ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು. ಪ್ರಾಸ್ತವಿಕ ಮಾತನಾಡಿದ ಹೊದ್ದೂರು ಗ್ರಾಮ ಪಂಚಾಯಿತಿಯ ಸದಸ್ಯ ಕೆ.ಮೊಣ್ಣಪ್ಪ ಪಾಲೆಮಾಡು ಕಾನ್ಸಿರಾಂ ನಗರದ ಅಭಿವೃದ್ಧಿಗೆ ನಿರಂತರವಾಗಿ ನಮ್ಮ ಅಹವಾಲುಗಳಿಗೆ ಉತ್ತಮವಾದ ಸ್ಪಂದನೆಯನ್ನು ನೀಡಿರುವ ಶಾಸಕ ಡಾ. ಮಂತರ್ ಗೌಡ ಅವರು, ನಗರಕ್ಕೆ ಅಗತ್ಯವಿರುವ ಅಂಬೇಡ್ಕರ್ ಭವನ ಮತ್ತು ಇನ್ನಿತರ ಬೇಡಿಕೆಗಳ ಅರ್ಜಿಯನ್ನು ಸಲ್ಲಿಸುವಂತೆ ಮನವಿ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕುಸುಮಾವತಿ, ಪ್ರಮುಖರಾದ ಮೈದು ಕೊಟ್ಟಮುಡಿ, ಎಂ.ಬಿ.ಹಮೀದ್ ಕಬಡಕೇರಿ, ವೈ.ಎಂ.ಲಕ್ಷ್ಮಿ ಮತ್ತು ಪೆಗ್ಗೋಳಿ ನಿವೇಶನ ಹೋರಾಟಗಾರಾದ ಕಿರಣ್ ಜಗದೀಶ್, ಮಹೇಶ್, ನಗರದ ಅಭಿವೃದ್ಧಿ ಸಮಿತಿಯ ಸದಸ್ಯರು, ಮಹಿಳಾ ಸಂಘಟನಾ ಸದಸ್ಯರು, ಅಂಬೇಡ್ಕರ್ ಯುವಕ ತಂಡದವರು ಹೋರಾಟಗಾರರು ಮತ್ತು ನಗರದ ಸಾರ್ವಜನಿಕರು ಹಾಜರಿದ್ದರು. ಎಂ.ರಂಜಿತ್ ಮೌರ್ಯ ನಿರೂಪಿಸಿ, ವಂದಿಸಿದರು. :: ಸನ್ಮಾನ :: ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ.ಹಂಸ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ, ಗ್ರಾಮ ಲೆಕ್ಕಾಧಿಕಾರಿ, ನಿರ್ಮಿತಿ ಕೇಂದ್ರದ ಕಾರ್ಯಪಾಲಕ ಅಭಿಯಂತರರು, ಮತ್ತು ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು.
ವರದಿ : ದುಗ್ಗಳ ಸದಾನಂದ











