ಬೆಂಗಳೂರು NEWS DESK ಜು.15 : ಕೊಡಗು ಜಿಲ್ಲೆಯ ಜನರನ್ನು ಕಾಡುತ್ತಿರುವ ಕಂದಾಯ ಭೂಮಿ ಮತ್ತು ಜಮ್ಮಾಬಾಣೆ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ರಾಜ್ಯ ಕಂದಾಯ ಸಚಿವ ಕೃಷ್ಣೇ ಭೈರೇಗೌಡ ಅವರನ್ನು ವಿಕಾಸಸೌಧದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು. ಕಂದಾಯ ಇಲಾಖೆಯ ಕೆಲವು ಮಸೂದೆಗಳಿಗೆ ತಿದ್ದುಪಡಿ ತರುವಂತೆ ಮನವಿ ಮಾಡಿದರು. ವಿಶೇಷವಾಗಿ, ಕೊಡಗಿನವರ ಜಮ್ಮಾಬಾಣೆಗೆ ಕಂದಾಯ ನಿಗದಿ, ಪಟ್ಟೇದಾರರ ಸಮಸ್ಯೆ ಮತ್ತು ಪಹಣಿ ಪತ್ರದಲ್ಲಿ P ನಂಬರ್ ಗಳ ಸಮಸ್ಯೆಯನ್ನು ನಿವಾರಣೆ ಮಾಡಲು ಸೂಕ್ತ ತಿದ್ದುಪಡಿಯನ್ನು ಕರ್ನಾಟಕ ಕಂದಾಯ ಕಾಯ್ದೆ 1964 ಕ್ಕೆ ತರಬೇಕೆಂದು ಕೋರಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಕಂದಾಯ ಸಚಿವರು, ಮುಂಬರುವ ಮುಂಗಾರು ಅಧಿವೇಶನದಲ್ಲಿ ಅಗತ್ಯ ತಿದ್ದುಪಡಿಯನ್ನು ತರಲಾಗುವುದೆಂದು ಭರವಸೆ ನೀಡಿದರು.










