ಮಡಿಕೇರಿ ಜು.15 NEWS DESK : ಸಮಾಜದ ಉತ್ತಮ ಅಭಿವೃದ್ಧಿಗೆ ಮತ್ತು ಗ್ರಾಮಗಳ ಮೂಲಭೂತ ಸೌಕರ್ಯಗಳಿಗೆ ಅಧಿಕಾರಿಗಳು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿದಾಗ ಗ್ರಾಮಗಳು ಅಭಿವೃದ್ಧಿಯಾಗಲು ಸಾಧ್ಯ ಎಂದು ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಕಾನ್ಸೀರಾಂಜೀ ನಗರದ ಸ್ಥಾಪಕಾಧ್ಯಕ್ಷ ಕೆ.ಮೊಣ್ಣಪ್ಪ ಅಭಿಪ್ರಾಯಪಟ್ಟರು. ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಕಚೇರಿಯಲ್ಲಿ ನಿರ್ದೇಶಕರಾದ ಶೇಖರ್ ಅವರನ್ನು ಹೊದ್ದೂರು ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಕಾನ್ಸೀರಾಂಜೀ ನಗರದ ಪಾಲೆಮಾಡುವಿನ ನಿವಾಸಿಗಳ ಪರವಾಗಿ ಸನ್ಮಾನಿಸಿ ಮಾತನಾಡಿದರು. ಅಧಿಕಾರಿಗಳನ್ನು ಸರಕಾರದ ಮಾನದಂಡದಂತೆ ಕರ್ತವ್ಯದ ಧ್ಯೇಯೋದ್ದೇಶದಿಂದ ಪ್ರಮಾಣ ವಚನ ಮಾಡಿ ಬರುತ್ತಾರೆ. ಸರ್ಕಾರಿ ಹುದ್ದೆಯಲ್ಲಿರುವ ಶೇ.75 ರಷ್ಟು ಅಧಿಕಾರಿಗಳು ನಾಮಕಾವಸ್ಥೆಗೆ ಕೆಲಸ ಮಾಡುತ್ತಾ ದರ್ಪ ಮತ್ತು ಬೇಜವಾಬ್ದಾರಿತನದಿಂದ ಕೂಡಿದ್ದು ಅಧಿಕಾರಿಗಳ ಭ್ರಷ್ಟಾಚಾರವು ತಾಂಡವವಾಡುತ್ತಿದೆ. ಇಂತಹ ಅಧಿಕಾರಿಗಳನ್ನು ಸಮಾಜವು ಸೂಕ್ಷ್ಮವಾಗಿ ನೋಡುತ್ತಿದೆ ಎಂಬ ಅರಿವು ಮೂಡಿಸಬೇಕು. ಆದ್ದರಿಂದ, ನಿಷ್ಠಾವಂತ ಅಧಿಕಾರಿಗಳಿಗೆ ಸನ್ಮಾನ ಅಭಿನಂದನೆಯನ್ನು ಸಲ್ಲಿಸುವ ಮೂಲಕ ಅಧಿಕಾರಿಗಳ ಜವಾಬ್ದಾರಿ ಮತ್ತು ಕರ್ತವ್ಯವನ್ನು ಹೆಚ್ಚಿಸಿ ಪ್ರಜ್ನಾವಂತ ಸಮಾಜಕ್ಕೆ ಮತ್ತು ಅಧಿಕಾರಿಗಳಿಗೆ ತಿಳಿಯಪಡಿಸುವ ಅಗತ್ಯವಿದೆ ಎಂದರು. ಕಾನ್ಸಿರಾಂಜೀ ನಗರ ಪಾಲೆಮಾಡುವಿನಂತಹ ಕುಗ್ರಾಮಗಳ ಅಭಿವೃದ್ಧಿಗೆ ಮತ್ತು ಮೂಲಭೂತ ಸೌಕರ್ಯಗಳ ನೆರವಿಗೆ ಶೇಖರ್ ಅವರ ದಕ್ಷತೆಯ ಕರ್ತವ್ಯ ನಿಷ್ಠೆ ಮತ್ತು ಪ್ರೀತಿ ಪೂರಕವಾಗಿರುತ್ತದೆ. ಇವರಂತ ಅಧಿಕಾರಿಗಳು ಭವಿಷ್ಯದ ಯುವ ಅಧಿಕಾರಿಗಳಿಗೆ ಸ್ಪೂರ್ತಿಯಾಗುತ್ತಾರೆ. ಇಂತಹ ಅಧಿಕಾರಿಗಳು ಜಿಲ್ಲೆಗೆ ಅಗತ್ಯವಿದೆ ಎಂದು ಆಶಯ ವ್ಯಕ್ತಪಡಿಸಿದರು. ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ.ಹಂಸ ಮಾತನಾಡಿ, ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಲ್ಲಿ ಮತ್ತು ಪಾಲೆಮಾಡುವಿನ ವಿಷಯದಲ್ಲಿ ಹೆಚ್ಚಿನ ಮುತೂವರ್ಜಿಯನ್ನು ವಹಿಸಿ ಮೊದಲ ಸರ್ಕಾರಿ ಬಸ್ಸು, ಹಕ್ಕು ಪತ್ರವನ್ನು ನೀಡಿರುವುದು, ಅದೇ ರೀತಿ ನೂತನವಾದ ಕಾಂಕ್ರೀಟ್ ರಸ್ತೆಗಳು, ಹೀಗೆ ಅಭಿವೃದ್ಧಿ ಕಾರ್ಯಗಳಲ್ಲಿ ಶೇಖರ್ ಅವರು ಕರ್ತವ್ಯ ನಿಷ್ಠೆಯನ್ನು ಮೆರೆದಿದ್ದಾರೆ ಎಂದು ಸಂತಸಪಟ್ಟರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕ ಶೇಖರ್ ಅವರು ಮಾತನಾಡಿ, ಅಧಿಕಾರಿಗಳು ಉತ್ತಮ ಕರ್ತವ್ಯಗಳನ್ನು ನಿರ್ವಹಿಸಲು ಶಾಸಕರಾದ ಡಾ. ಮಂತರ್ ಗೌಡ ಅವರು ಮುಕ್ತವಾದ ಸ್ವಾತಂತ್ರ್ಯವನ್ನು ನೀಡಿದ್ದು, ಅವರಿಗೆ ಧನ್ಯವಾದ ತಿಳಿಸುತ್ತೇನೆ ಮತ್ತು ಹೊದ್ದೂರು ಗ್ರಾಮ ಪಂಚಾಯಿತಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ವಿನೂತನವಾಗಿ ಅನುಷ್ಠಾನಕ್ಕೆ ತರುತ್ತದೆ ಇದೆ ರೀತಿ ಜಿಲ್ಲೆಯ ಎಲ್ಲಾ ಪಂಚಾಯಿತಿಗಳು ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹೊದ್ದೂರು ಗ್ರಾಮ ಪಂಚಾಯಿತಿಯ ಸದಸ್ಯರಾದ ಎಂ.ಬಿ.ಹಮೀದ್, ಕುಸುಮಾವತಿ ಆನಂದ್, ನರೇಗಾ ಯೋಜನೆಯ ತಾಲೂಕು ಸಹ ನಿರ್ದೇಶಕರಾದ ಹೇಮಂತ್, ಇಲಾಖೆಯ ಸಿಬ್ಬಂದಿ ವರ್ಗದವರು ಕಾನ್ಸಿರಾಂಜಿ ನಗರ ಪಾಲೆಮಾಡುವಿನ ನಿವಾಸಿಗಳು ಹಾಜರಿದ್ದರು.
ಅಭಿವೃದ್ಧಿ ಅಧಿಕಾರಿಗಳಾದ ಎ.ಎ.ಅಬ್ದುಲಾ ಸ್ವಾಗತಿಸಿ, ವಂದಿಸಿದರು.
ವರದಿ :: ಎಂ ರಂಜಿತ್ ಮೌರ್ಯ











