*ಹಠಾತ್ ಮೇಘಸ್ಫೋಟದಿಂದ ಗ್ರಾಮಕ್ಕೆ ಗ್ರಾಮವೇ ನಾಶವಾದ ಘಟನೆ ಉತ್ತರಾಖಂಡದ ಉತ್ತರಕಾಶಿಯ ಧರಾಲಿ ಪ್ರದೇಶದಲ್ಲಿ ಖೀರ್ ಗಂಗಾ ನದಿ ಭಾಗದಲ್ಲಿ ನಡೆದಿದೆ. ಇಂದು ಬೆಳಿಗ್ಗೆ ನಡೆದ ಈ ಘಟನೆಯಿಂದ 60ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ನೈಸರ್ಗಿಕ ಮೇಘಸ್ಫೋಟ ಧರಾಲಿ ಮಾರುಕಟ್ಟೆಗೆ ಭಾರಿ ಹಾನಿಯನ್ನುಂಟು ಮಾಡಿದೆ. ಬಲವಾದ ಪ್ರವಾಹದಿಂದಾಗಿ, ಅಂಗಡಿಗಳು, ವಾಹನಗಳು ಮತ್ತು ಮನೆಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರವಾಹದ ಸ್ಥಳವು ತುಂಬಾ ಭಯಾನಕವಾಗಿದ್ದು, ನೀರಿನ ಹರಿವು ಎಷ್ಟು ವೇಗವಾಗಿತ್ತೆಂದರೆ ದೊಡ್ಡ ಕಲ್ಲುಗಳು ಮತ್ತು ಅವಶೇಷಗಳು ಸಹ ಮಾರುಕಟ್ಟೆ ಪ್ರದೇಶಕ್ಕೆ ನುಗ್ಗಿವೆ. ಈ ಪ್ರವಾಹದಲ್ಲಿ ಅನೇಕರು ಕೊಚ್ಚಿ ಹೋಗಿದ್ದಾರೆ. ಧರಾಲಿ ಪ್ರದೇಶದಲ್ಲಿ ಮೇಘಸ್ಫೋಟದಿಂದ ಉಂಟಾದ ಭಾರೀ ಹಾನಿ ದುಃಖಕರ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಜನರ ರಕ್ಷಣಾ ಕಾರ್ಯ ಮುಂದುವರೆದಿದೆ.










