
ಮಡಿಕೇರಿ NEWS DESK ಆ.9 : ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಕಾರ್ಮಿಕರೊಬ್ಬರು ಗಾಯಗೊಂಡಿರುವ ಘಟನೆ ವಿರಾಜಪೇಟೆ ತಾಲ್ಲೂಕು ಅಮ್ಮತಿ ಗ್ರಾ.ಪಂ ವ್ಯಾಪ್ತಿಯ ಇಂಜಿಲಗೆರೆ ಬಳಿ ನಡೆದಿದೆ. ಕಾಫಿ ತೋಟದ ಕೆಲಸಕ್ಕೆಂದು ಆಟೋರಿಕ್ಷಾದಲ್ಲಿ ತೆರಳುತ್ತಿದ್ದ ಪ್ರದೀಪ್ ಎಂಬುವವರೇ ಗಾಯಗೊಂಡಿರುವ ಕಾರ್ಮಿಕ. ಇಂದು ಬೆಳಿಗ್ಗೆ ಮೂವರು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಆಟೋರಿಕ್ಷಾದ ಮೇಲೆ ಮುಖ್ಯರಸ್ತೆಯ ತಿರುವಿನಲ್ಲಿ ತೋಟದೊಳಗಿನಿಂದ ದಿಢೀರ್ ಆಗಿ ಧಾವಿಸಿದ ಆನೆ ದಾಳಿ ಮಾಡಿದೆ. ಈ ಸಂದರ್ಭ ಆನೆಯ ದಂತ ತಗುಲಿ ಪ್ರದೀಪ್ ಗಾಯಗೊಂಡರು ಎಂದು ತಿಳಿದು ಬಂದಿದೆ. ಆಟೋದಲ್ಲಿದ್ದವರು ಕಿರುಚಿಕೊಂಡಾಗ ಮತ್ತೊಮ್ಮೆ ದಾಳಿ ಮಾಡಲು ಕಾಡಾನೆ ಮುಂದಾಗಿದೆ. ಸಮಯ ಪ್ರಜ್ಞೆ ಮೆರೆದ ಆಟೋ ಚಾಲಕ ಫಿರೋಜ್ ಅವರು ವೇಗವಾಗಿ ಆಟೋವನ್ನು ಚಲಾಯಿಸಿದ್ದಾರೆ. ಆಟೋದ ಹಿಂಭಾಗದಲ್ಲಿ ಕಾಡಾನೆ ಓಡಿ ಬಂದಿತ್ತಾದರೂ ಬೇರೊಂದು ವಾಹನ ಬಂದ ತಕ್ಷಣ ಪಕ್ಕದ ತೋಟದೊಳಗೆ ನುಸುಳಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಲಯ ಅರಣ್ಯ ಅಧಿಕಾರಿ ಶಿವರಾಮ ಅವರ ನಿರ್ದೇಶನದ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಸಂಜಿತ್ ಸೋಮಯ್ಯ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಅಗಮಿಸಿದರು. ಗಾಯಾಳುವಿಗೆ ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ಗಾಯಾಳು ಪ್ರದೀಪ್ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಕಾಡಾನೆಗಳ ಹಾವಳಿ ಮಿತಿ ಮೀರುತ್ತಿರುವ ಕುರಿತು ಗ್ರಾಮಸ್ಥರು ಹಾಗೂ ಕಾರ್ಮಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.








