
ಮಡಿಕೇರಿ ಮಾ.15 NEWS DESK : ಸಮಾಜದಲ್ಲಿನ ಈ ರೀತಿಯ ಸಂಕಷ್ಟ ಕುಟುಂಬಗಳನ್ನು ಗುರುತಿಸಿ ತಮ್ಮಿಂದ ಸಾಧ್ಯವಿರುವ ಸೌಲಭ್ಯ ನೀಡುವ ಮೂಲಕ ಮಾನವೀಯ ಸ್ನೇಹಿತರ ಒಕ್ಕೂಟವು ಪ್ರಶಂಸೆಗೆ ಪಾತ್ರವಾಯಿತು. ಸ್ನೇಹಿತರ ಒಕ್ಕೂಟದ ಜಿಲ್ಲಾ ಮಟ್ಟದ ವಾರ್ಷಿಕ ಕಾರುಣ್ಯ ಕಾರ್ಯಕ್ರಮ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ನಡೆದ ಸಂದರ್ಭ ಮಕ್ಕಳು, ಮಹಿಳೆಯರು ಸೇರಿದಂತೆ ಜಿಲ್ಲೆಯ ಸುಮಾರು 70ಕ್ಕೂ ಅಧಿಕ ಅರ್ಹ ಫಲಾನುಭವಿಗಳು ಸ್ವೀಕರಿಸಿರು. ಅದಾಯ ಮಾರ್ಗವಿಲ್ಲದೆ ಬಲುಕಷ್ಟ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದ ಕುಟುಂಬಗಳಿಗೆ ಉತ್ತಮ ದರ್ಜೆಯ ಆಹಾರದ ಕಿಟ್, ಅನಾರೋಗ್ಯದಿಂದ ಬಳಲುತ್ತಿದ್ದಮಂದಿಯ ಚಿಕಿತ್ಸೆಗೆ ತಲಾ 5 ಸಾವಿರ ರೂಪಾಯಿ ಹಾಗೂ ವಿದ್ಯೆ ಕಲಿಯುವ ಕಷ್ಟದ ಕುಟುಂಬದಮಕ್ಕಳಿಗೆ ಪಠ್ಯ ಪರಿಕರ ಸೇರಿದಂತೆ ಒಟ್ಟು 70ಕ್ಕೂ ಅಧಿಕ ಮಂದಿಗೆ ರೂ 3,00,000 ವೆಚ್ಚದಲ್ಲಿ ಸವಲತ್ತುಗಳನ್ನು ವಿತರಿಸಲಾಯಿತು. ನಡೆಯಲಾಗದ ಅಶಕ್ತರನ್ನು ಒಕ್ಕೂಟದ ಕಾರ್ಯಕರ್ತರು ಎತ್ತಿಕೊಂಡು ಸಭಾಂಗಣಕ್ಕೆ ಕರೆತಂದು ಕೂರಿಸಿ ಅರ್ಹ ಸವಲತ್ತುಗಳನ್ನು ನೀಡಿದರು. ಒಕ್ಕೂಟದ ವಕ್ತಾರ ಶಶಿಕುಮಾರ್ ಚೆಟ್ಟಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರುಣ್ಯ ಕಾರ್ಯಕ್ರಮವನ್ನು ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷ ಹೆಚ್.ಎಂ.ನಂದ ಕುಮಾರ್ ಅವರು ಉದ್ಘಾಟಿಸಿ ಒಕ್ಕೂಟದ ಕಾರ್ಯವನ್ನು ಪ್ರಶಂಶಿಸಿದರು. ಒಕ್ಕೂಟದ ಕಾರ್ಯಕರ್ತರು ಕಾರುಣ್ಯ ಕಾರ್ಯಕ್ರಮ ನಡೆಸಲು ಅಂಬೇಡ್ಕರ್ ಭವನವನ್ನು ಉಚಿತವಾಗಿ ಕೇಳಿದ ಸಂದರ್ಭ ಬಡವರ ಕಣ್ಣೀರು ಒರೆಸುವ ಕಾರ್ಯಕ್ರಮಕ್ಕಾಗಿ ನೀಡಿದ್ದೇವೆ ಎಂದು ನಂದ ಕುಮಾರ್ ಹೇಳಿದರು. ಮುಖ್ಯ ಅತಿಥಿ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಅವರು ಮಾತನಾಡಿ, ಒಕ್ಕೂಟದ ಜನೋಪಯೋಗಿ ಕೆಲಸ ಕಾರ್ಯಗಳನ್ನು ಪ್ರಶಂಶಿಸಿದರು. ಸಾರ್ವಜನಿಕರ ದೇಣಿಗೆಯನ್ನು ಪಡೆಯದೆ ವಾಟ್ಸಾಪ್ ಗ್ರೂಪ್ ಅನ್ನು ರಚಿಸಿ ಸದಸ್ಯರ ಸಹಕಾರದೊಂದಿಗೆ ಮೂರು ಲಕ್ಷಕ್ಕೂ ಅಧಿಕ ಮೊತ್ತದ ಸವಲತ್ತು ವಿತರಣಾ ಕಾರ್ಯಕ್ರಮ ನಡೆಸಿರುವುದು ನಿಜಕ್ಕೂ ವಿಸ್ಮಯ ಎಂದ ಅವರು, ಇಂತಹ ಗ್ರೂಪ್ನ ಓರ್ವ ಸದಸ್ಯನೆಂದು ಹೇಳಿಕೊಳ್ಳಲು ತನಗೆ ಹೆಮ್ಮೆ ಎನಿಸುತ್ತಿದೆ ಎಂದರು. ಮತ್ತೋರ್ವ ಮುಖ್ಯ ಅತಿಥಿ ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಮುಸ್ತಫ ಮಾದಾಪುರ ಅವರು, ಒಕ್ಕೂಟದ ಮಾನವೀಯ ಚಟುವಟಿಕೆಗಳು ಯೋಗ್ಯವಾಗಿದೆ ಎಂದರು. ಒಕ್ಕೂಟದ ಸ್ಥಾಪಕ ಅಡ್ಮಿನ್ ಅನಿಲ್ ರೈ, ಸದಸ್ಯರುಗಳಾದ ಚೆಟ್ರಂಡ ಲೀಲಾ ಮೇದಪ್ಪ, ಅಸ್ಮತ್ ಮಾತನಾಡಿದರು. ಮಂಗಳೂರಿನ ಉದ್ಯಮಿ, ಒಕ್ಕೂಟದ ಕೊಡುಗೈ ದಾನಿ ಅಮಿತ್ ಡಿಸೋಜಾ ಅವರು ಪಾಲ್ಗೊಂಡಿದ್ದರು. ಒಕ್ಕೂಟದ ಪ್ರತಿನಿಧಿ ಹಾಗೂ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರ ಇಂಪಾದ ಧ್ಯೇಯ ಗೀತೆಯೊಂದಿಗೆ ಪ್ರಾರಂಭಗೊಂಡ ಸಮಾರಂಭದಲ್ಲಿ ಒಕ್ಕೂಟದ ವಕ್ತಾರ, ಪತ್ರಕರ್ತ ಎಂ.ಇ.ಮಹಮದ್ ಅವರು ವರದಿ ವಾಚಿಸಿದರು. ಅಡ್ಮಿನ್ ಗಳಾದ ಲೀಲಾವತಿ, ಕವಿತಾ ರಮೇಶ್, ನಿಯಾಜ್ ಸುಂಟಿಕೊಪ್ಪ, ಕೆ.ಎಸ್.ಅನಿಲ್ ಕುಮಾರ್, ಹನೀಫ್ ಸೋನ, ದಶರಥ, ಚೀರಂಡಚಂಗಪ್ಪ, ಅಗ್ನಿ ಚೆನ್ನನಾಯಕ ಉಪಸ್ಥಿತರಿದ್ದರು. ಅಡ್ಮಿನ್ ಕವಿತಾ ರಮೇಶ್ ಅವರು ಅತಿಥಿಗಳಿಗೆ ಹೂವಿನ ಕುಂಡಗಳನ್ನು ನೀಡುವ ವ್ಯವಸ್ಥೆ ಏರ್ಪಡಿಸಿದ್ದರು. ಸಮಾರಂಭಕ್ಕೆ ಆಗಮಿಸಿದ ಸದಸ್ಯರುಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಅಡ್ಮಿನ್ ಇಂದಿರಾ ಎ.ಎಚ್. ಸ್ವಾಗತಿಸಿದರು. ಅಡ್ಮಿನ್ ಬಾಳೆಯಡ ದಿವ್ಯಾ ಮಂದಪ್ಪ ನಿರೂಪಿಸಿದರು. ಒಕ್ಕೂಟದ ಪೊನ್ನಂಪೇಟೆ ಪ್ರತಿನಿಧಿ ಟಿ.ಆರ್.ವಿನೋದ್ ವಂದಿಸಿದರು.









