
ಮಡಿಕೇರಿ ಆ.16 NEWS DESK : ಮುಸಲ್ಮಾನರನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ಯಾವುದೇ ಅಧಿಕಾರವನ್ನು ನೀಡದೆ ಅನ್ಯಾಯ ಮಾಡುತ್ತಿದೆ ಎಂದು ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಜಿ.ಜಾಶಿರ್ ಟೀಕಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬದಲಾವಣೆ ತರಬೇಕು ಎಂಬ ಉದ್ದೇಶದಿಂದ ಮುಸಲ್ಮಾನ ಸಮುದಾಯದವರು ಒಗ್ಗೂಡಿ ಶೇ.99 ರಷ್ಟು ಕಾಂಗ್ರೆಸ್‍ಗೆ ಮತಹಾಕಿ ಇಬ್ಬರು ಶಾಸಕರನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ಜಿಲ್ಲೆಯ ಮುಸಲ್ಮಾನ ಸಮುದಾಯವನ್ನು ಎರಡನೇ ದರ್ಜೆಯ ಕೆಲಸಗಾರರಂತೆ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತಗಳನ್ನು ನೀಡಿದ್ದರೂ ಅಧ್ಯಕ್ಷ ಸ್ಥಾನವನ್ನು ಕೇಳುವ ನೈತಿಕತೆ ನಮ್ಮ ಸಮುದಾಯದ ನಾಯಕರಿಗಿಲ್ಲದಂತಾಗಿದೆ. ಮತಗಳಿಕೆಗೆ ಮಾತ್ರ ಮುಸಲ್ಮಾನರಿಗೆ ಯೋಜನೆಗಳನ್ನು ಘೋಷಿಸಲಾಗುತ್ತಿದೆ, ಮುಸಲ್ಮಾನ ಗುತ್ತಿಗೆದಾರರಿಗೆ ಯಾವುದೇ ಕೆಲಸಗಳನ್ನು ನೀಡುತ್ತಿಲ್ಲ. ಮುಸಲ್ಮಾನರಲ್ಲಿ ಶೇ.5 ರಷ್ಟು ಮಂದಿ ಮಾತ್ರ ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಗುರುತಿಸಿಕೊಂಡರೆ ಶೇ.99 ರಷ್ಟು ಮಂದಿ ಮತದಾರರಿದ್ದಾರೆ. ಆದರೂ ಸಮುದಾಯದ ಅಭಿವೃದ್ಧಿಗೆ ಅನುದಾನ ತರುವ ಕೆಲಸ ಕಾಂಗ್ರೆಸ್ ನಾಯಕರಿಂದ ಆಗುತ್ತಿಲ್ಲ. ಅತೀ ಹೆಚ್ಚು ಮುಸಲ್ಮಾನರೇ ವಾಸಿಸುವ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಯೂ ಮರೀಚಿಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಆಕಾಂಕ್ಷಿಗಳಿಂದ ರೆಸಾರ್ಟ್ ರಾಜಕೀಯ ನಡೆಯುತ್ತಿದೆ. ವಕ್ಫ್ ಬೋರ್ಡ್ ಕೇವಲ ಮದರಸ, ಮಸೀದಿಗಳ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದ್ದು, ಅಧ್ಯಕ್ಷ ಸ್ಥಾನ ಸಿಕ್ಕದಾಕ್ಷಣ ಮುಸಲ್ಮಾನ ಸಮುದಾಯದ ಏಳಿಗೆ ಸಾಧ್ಯವಿಲ್ಲ. ಅಧ್ಯಕ್ಷ ಸ್ಥಾನಕ್ಕಾಗಿ ಪರಸ್ಪರ ಸ್ಪರ್ಧೆಗಳಿದಿರುವುದು ಮತ್ತು ಲಾಬಿ ನಡೆಸುತ್ತಿರುವುದು ಹಾಸ್ಯಾಸ್ಪದ ಬೆಳವಣಿಗೆಯಾಗಿದೆ ಎಂದು ಕೆ.ಜಿ.ಜಾಶಿರ್ ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷದಲ್ಲಿರುವ ಮುಸಲ್ಮಾನ ನಾಯಕರು ಮೂಲಭೂತ ಸೌಲಭ್ಯಗಳ ಬಗ್ಗೆ ಮಾತನಾಡುತ್ತಿಲ್ಲ, ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನ ಮಾಡುತ್ತಿಲ್ಲ. ನ್ಯಾಯಯುತವಾಗಿ ಸಿಗಬೇಕಾದ ಹಕ್ಕುಗಳ ಕುರಿತು ಪ್ರತಿಪಾದಿಸುತ್ತಿಲ್ಲ. ಇದೆಲ್ಲವನ್ನು ಗಮನಿಸಿದರೆ ಶಾಸಕರುಗಳ ವಿರುದ್ಧ ಯಾರೂ ಮಾತನಾಡಬಾರದು, ಪ್ರಶ್ನಿಸಬಾರದು ಮತ್ತು ಬೇಡಿಕೆಯನ್ನಿಡಬಾರದು ಎನ್ನುವ ಮನೋಭಾವನೆ ಬೆಳೆದಂತೆ ಕಂಡು ಬರುತ್ತಿದೆ ಎಂದರು. ಮೈಸೂರು- ಕೊಡಗು ಕ್ಷೇತ್ರದ ಸಂಸದರು ಯಾವುದೇ ಪ್ರಚಾರವನ್ನು ಬಯಸದೆ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ. ವಿರಾಜಪೇಟೆ ಕ್ಷೇತ್ರದ ಶಾಸಕರು ಕ್ಷೇತ್ರಕ್ಕೆ ಸಾವಿರ ಕೋಟಿ ತಂದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಮುಸಲ್ಮಾನರ ಕ್ರೀಡಾಕೂಟಗಳಿಗೆ ಸರಕಾರದ ಅನುದಾನ ದೊರೆಯುತ್ತಿಲ್ಲ. ಮುಸಲ್ಮಾನರೇ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ. ಕೇವಲ ಒಂದು ಗುಂಪಿನ ಓಲೈಕೆಗಾಗಿ ತಮ್ಮ ಕಾರ್ಯವನ್ನು ಸೀಮಿತಗೊಳ್ಳಿಸಿದ್ದಾರೆ ಎಂದು ಕೆ.ಜಿ.ಜಾಶಿರ್ ಆರೋಪಿಸಿದರು. ಜಿಲ್ಲೆಯಲ್ಲಿ ಕೇವಲ ಬದಲಾವಣೆಗಾಗಿ ಮಾತ್ರ ಮತದಾರರು ಇಬ್ಬರು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮುಸಲ್ಮಾನ ಸಮುದಾಯಕ್ಕೆ ಏನು ಕೊಡುಗೆ ನೀಡುತ್ತಿದೆ ಎನ್ನುವುದನ್ನು ಜೆಡಿಎಸ್ ಗಮನಿಸುತ್ತಿದೆ. ಇದೇ ರೀತಿ ಕಡೆಗಣನೆ ಮುಂದುವರೆದರೆ ಮುಸಲ್ಮಾನರು ಕಾಂಗ್ರೆಸ್ ಪಕ್ಷವನ್ನು ತೊರೆದು ಪರ್ಯಾಯ ರಾಜಕೀಯ ಶಕ್ತಿಯೊಂದಿಗೆ ಗುರುತಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೆ.ಜಿ.ಜಾಶಿರ್ ಅವರು ಜೆಡಿಎಸ್ ಪಕ್ಷದಲ್ಲಿ ಯುವಕ ಸಂಖ್ಯೆ ಹೆಚ್ಚು ಇದ್ದು, ಪಕ್ಷ ಸಂಘಟನೆಗಾಗಿ ಮುಂದಿನ ದಿನಗಳಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಗ್ರಾ.ಪಂ ಮಟ್ಟದಿಂದಲೇ ಚುನಾವಣೆಗಳನ್ನು ಎದುರಿಸುವ ಮೂಲಕ ಜೆಡಿಎಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಕೆ.ಎಂ.ಅಶ್ರಫ್, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಮಜೀದ್ ಚೊಕಂಡಳ್ಳಿ, ಯುವ ಘಟಕದ ಅಧ್ಯಕ್ಷ ಕೆ.ಹೆಚ್.ಸೈಫುದ್ಧೀನ್ ಹಾಗೂ ಕುಶಾಲನಗರ ತಾಲ್ಲೂಕು ಅಧ್ಯಕ್ಷ ವಿಪಿಎಸ್ ಶಿಯಾಬ್ ಉಪಸ್ಥಿತರಿದ್ದರು.









