
ಮಡಿಕೇರಿ ಆ.16 NEWS DESK : ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಮಾಸಿಕ ಸಭೆ, 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮತ್ತು ಶ್ರಮದಾನ ನಡೆಯಿತು. ತಾಳತ್ತಮನೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ ಅವರು ಸಂಘಕ್ಕೆ ಸೇರಿದ ನೂತನ ಕಟ್ಟಡದ ಮುಂದಿನ ಕಾಮಗಾರಿಗೆ ಅನುದಾನ ಕ್ರೋಢೀಕರಿಸುವ ಕುರಿತು ಚರ್ಚಿಸಿದರು. ಕಟ್ಟಡದ ಮೇಲ್ಛಾವಣಿ ನಿರ್ಮಾಣಕ್ಕೆ ಸುಮಾರು 18 ಲಕ್ಷ ರೂ.ಗಳ ಅಗತ್ಯವಿದೆ. ಈ ಮೊತ್ತವನ್ನು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಮೂಲಕ ಪಡೆಯಲು ಮನವಿಪತ್ರ ಸಲ್ಲಿಸಲು ನಿರ್ಧಾರ ಕೈಗೊಂಡರು. *ಸಂಘಟನಾ ಭೇಟಿ* ಮುಂದಿನ ಮಾಸಿಕ ಸಭೆಗೂ ಮೊದಲು ಕರಿಕೆ ಉಪಸಮಿತಿ ಮತ್ತು ಕುಂಡಾಡು ಉಪಸಮಿತಿಗೆ ಸಂಘದ ಆಡಳಿತ ಮಂಡಳಿಯ ಸದಸ್ಯರು ಸಂಘಟನಾ ಭೇಟಿ ನೀಡುವುದು, 2ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ನಡೆಸಲು ಯಾವುದೇ ಉಪಸಮಿತಿ ಮುಂದೆ ಬಂದಲ್ಲಿ ಕ್ರೀಡಾಕೂಟವನ್ನು ಆಯೋಜನೆಗೊಳಿಸುವುದು, ಸಂಘದ ಸದಸ್ಯರಿಗೆ ಆರೋಗ್ಯ ನಿಧಿ ಮತ್ತು ಸದಸ್ಯರ ಮಕ್ಕಳಿಗೆ ವಿದ್ಯಾನಿಧಿ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ದಿನೇಶ್ ಕೆ.ಪಿ ಕುಂಡಾಡು, ದೇಜನ್ಯ ಪ್ರಸನ್ನ ಕಟ್ಟೆಮಾಡು ಹಾಗೂ ಕುಶಾಲಪ್ಪ ಸಿ.ಎ ಕುದ್ರೆಪಾಯ ಅವರುಗಳು ಸಂಘದ ಅಜೀವ ಸದಸ್ಯತ್ವವನ್ನು ಪಡೆದುಕೊಂಡರು. *ಧ್ವಜಾರೋಹಣ* ಸಭೆಗೂ ಮೊದಲು ಸಂಘದ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವೃತ್ತ ಯೋಧ ಎಂ.ಟಿ.ಆನಂದ ರಾವ್ ಕಟ್ಟೆಮಾಡು ಧ್ವಜಾರೋಹಣ ನೆರವೇರಿಸಿದರು. ನಂತರ ನಿರ್ಮಾಣ ಹಂತದಲ್ಲಿರುವ ಸಂಘದ ಮೂರು ಅಂತಸ್ತಿನ ಕಟ್ಟಡದ ಒಳಾಂಗಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಕುದ್ರೆಪಾಯ ಉಪ ಸಮಿತಿ ವತಿಯಿಂದ ಬೆಳಗ್ಗಿನ ಉಪಹಾರ ಮತ್ತು ರತ್ನಮಂಜರಿ ನರಸಿಂಹ ಹಾಗೂ ಕಾಂತಿ ಯೋಗೇಂದ್ರ ಅವರಿಂದ ಮಧ್ಯಾಹ್ನದ ಲಘು ಉಪಹಾರವನ್ನು ನೀಡಲಾಯಿತು. ಕಾರ್ಯದರ್ಶಿ ಹೂವಮ್ಮ ಸ್ವಾಗತಿಸಿ, ರತ್ನಮಂಜರಿ ನರಸಿಂಹ ವಂದಿಸಿದರು.









