
ಸಂಪಾಜೆ NEWS DESK ಆ.17 : ಯುವ ಜನಾಂಗ ಸ್ವಾತಂತ್ರ್ಯದ ಮಹತ್ವವನ್ನು ಅರಿತುಕೊಳ್ಳಬೇಕು, ದೇಶಪ್ರೇಮ ಬೆಳೆಸಿಕೊಳ್ಳಬೇಕು ಮತ್ತು ಹೋರಾಟಗಾರರನ್ನು ಸ್ಮರಿಸಿಕೊಳ್ಳಬೇಕು ಎಂದು ನಿವೃತ್ತ ಯೋಧ ಕೀಲಾರು ಸಚಿನ್ ವಿಶ್ವನಾಥ್ ಅವರು ಕರೆ ನೀಡಿದ್ದಾರೆ. ಸಂಪಾಜೆ ಸಯುಕ್ತ ಪದವಿ ಪೂರ್ವ ಕಾಲೇಜ್ ನಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕಾಲೇಜ್ ನ ಹಿರಿಯ ವಿದ್ಯಾರ್ಥಿ ಹಾಗೂ ನಿವೃತ್ತ ಯೋಧ ಕೀಲಾರು ಸಚಿನ್ ಅವರು ಯುವ ಜನಾಂಗ ಸ್ವಾತಂತ್ರ್ಯದ ಮಹತ್ವವನ್ನು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ದೇಶಪ್ರೇಮ ಮೆರೆಯಬೇಕು, ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡಿ ಬಲಿದಾನಗೈದ ಮಹಾನ್ ವ್ಯಕ್ತಿಗಳನ್ನು ಸ್ಮರಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕ ಎಂ.ಶಂಕರನಾರಾಯಣ ಭಟ್ ಅವರು ವಿದ್ಯಾರ್ಥಿಗಳು ನಮ್ಮ ದೇಶದ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಅರಿತುಕೊಳ್ಳಬೇಕು. ಉತ್ತಮ ಮೌಲ್ಯಗಳಿಂದ ಜೀವನ ನಡೆಸಬೇಕು ಎಂದು ಹೇಳಿದರು.
ನಬಾರ್ಡ್ ನ ನಿವೃತ್ತ ಸಹಾಯಕ ಮಹಾ ಪ್ರಬಂಧಕ ಎಂ.ಸಿ.ನಾಣಯ್ಯ ಅವರು ಮಾತನಾಡಿ ವಿದ್ಯಾರ್ಥಿಗಳು ತಂದೆ, ತಾಯಿಗಳಿಗೆ ಹಾಗೂ ಹಿರಿಯರಿಗೆ ಗೌರವ ನೀಡಬೇಕು. ದುಶ್ಚಟಗಳಿಂದ ಮುಕ್ತರಾಗಿ ಯೋಗ್ಯ ಪ್ರಜೆಗಳಾಗಿ ಜೀವಿಸಿದರೆ ನೀವು ದೇಶಕ್ಕೆ ನೀಡಿದ ದೊಡ್ಡ ಕೊಡುಗೆಯಾಗುತ್ತದೆ ಎಂದು ಹೇಳಿದರು. ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಕಿಶೋರ್ ಕುಮಾರ್ ದೇಶಭಕ್ತಿಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ ಯೋಧ ಸಚಿನ್ ವಿಶ್ವನಾಥ್, ಚೆಂಬು ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ರಮೇಶ್, ನಬಾರ್ಡ್ ನಿವೃತ್ತ ಸಹಾಯಕ ಮಹಾ ಪ್ರಬಂಧಕ ಎಂ.ಸಿ.ನಾಣಯ್ಯ ಹಾಗೂ ಸಂಪಾಜೆ ಲಯನ್ಸ್ ಅಧ್ಯಕ್ಷ ಕಿಶೋರ್ ಕುಮಾರ್ ಅವರುಗಳನ್ನು ಕಾಲೇಜ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.









