
ಸುಂಟಿಕೊಪ್ಪ ಆ.18 NEWS DESK : 7ನೇ ಹೊಸಕೋಟೆಯ ಶ್ರೀ ಮಹಾಗಣಪತಿ ಮತ್ತು ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ದೇವಾಲಯದ ಆವರಣದಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ಮತ್ತು 5 ವರ್ಷ ಮೇಲ್ಪಟ್ಟ ಮಕ್ಕಳಿಗೆ 2ನೇ ವರ್ಷದ ಕೃಷ್ಣ ರಾಧೆ ಛದ್ಮವೇಷ ಸ್ಪರ್ಧೆ ನಡೆಯಿತು. ಕಾರ್ಯಕ್ರಮವನ್ನು ಶ್ರೀ ಮಹಾಗಣಪತಿ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ ಉದ್ಘಾಟಿಸಿ, ಮಕ್ಕಳಲ್ಲಿ ಆಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ವೇದಿಕೆ ಕಲ್ಪಿಸಿದ ಸಮಿತಿ ಸದಸ್ಯರನ್ನು ಅಭಿನಂಧಿಸಿದರಲ್ಲದೆ, ಇಂದಿನ ಮಕ್ಕಳು ಮೊಬೈಲ್, ಅಂತರ್ಜಾಲಗಳಲ್ಲಿ ತೊಡಗಿಕೊಳ್ಳುತ್ತಿದ್ದು, ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ರೀತಿಯ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಿರುವುದು, ಜೊತೆಗೆ ಮಕ್ಕಳು ಪ್ರತಿಭೆಗಳನ್ನು ಅನಾವರಣಗೊಳಿಸಲು ಪೋಷಕರೊಂದಿಗೆ ಪಾಲ್ಗೊಂಡಿರುವುದು ಆಶಾದಾಯಕ ವಿಚಾರವಾಗಿದೆ ಎಂದು ಹೇಳಿದರು. ಪೋಷಕರು ಮತ್ತು ಮಕ್ಕಳಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಸಮಿತಿಯ ಸದಸ್ಯರು ಬಹುಮಾನವಾಗಿ ಪುಸ್ತಕಗಳನ್ನು ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಮತ್ತು ಉಳಿದವರಿಗೆ ಅನುಸರಣಿಯ ಮಾದರಿ ಎಂದು ರಮೇಶ್ ಬಣ್ಣಿಸಿದರು. ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ ಮಕ್ಕಳ ಸ್ಪರ್ಧೆಯಲ್ಲಿ 28 ಮಕ್ಕಳು ಪಾಲ್ಗೊಂಡಿದ್ದು, ಮೊದಲ 3 ಸ್ಥಾನಗಳನ್ನು ಕ್ರಮವಾಗಿ ಆದ್ವಿಕ್, ಚರಿಸ್ಮಾ ಎಂ.ಎಚ್. ಮತ್ತು ಶ್ರೀನ್ಯ ಪಡೆದರು. 5 ವರ್ಷ ಮೇಲ್ಪಟ್ಟ ಮಕ್ಕಳ ಸ್ಪರ್ಧೆಯಲ್ಲಿ 25 ಮಕ್ಕಳು ಪಾಲ್ಗೊಂಡಿದ್ದು ಮೊದಲ 3 ಸ್ಥಾನಗಳನ್ನು ವಿಸ್ಮಿತಾ ಶೇಖರ್, ವಿನಯ ಪ್ರಶಾಂತ್ ಮತ್ತು ಅಮರನಾಥ್ ಪಡೆದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಮಕ್ಕಳಿಗೂ ಪ್ರೋತ್ಸಾಹ ಬಹುಮಾನಗಳಾಗಿ ಶ್ರೀಕೃಷ್ಣ ಚರಿತ್ರೆ ಪುಸ್ತಕವನ್ನು ವಿತರಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಪತ್ರಕರ್ತರುಗಳಾದ ಕೆ.ತಿಮ್ಮಪ್ಪ, ಬಿ.ಸಿ.ದಿನೇಶ್ ಹಾಗೂ ನೃತ್ಯ ಕಲಾವಿದ ಶಾನು ಮತ್ತು ರಮ್ಯಾ ದಿನೇಶ್ ಕಾರ್ಯನಿರ್ವಹಿಸಿದರು. ಶ್ರೀಕೃಷ್ಣ ಜನ್ಮಷ್ಠಾಮಿ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಂಡಿದ್ದು, ಸುತ್ತ ಮುತ್ತಲಿನ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ದೇವಾಲಯ ಸಮಿತಿ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ, ಕಾರ್ಯದರ್ಶಿ ಶಿವಪ್ಪ, ಸಮಿತಿ ಸದಸ್ಯರುಗಳಾದ ರುಕ್ಮಯ್ಯ, ರಾಮಚಂದ್ರ, ಕಿರಣ್ ಡಿ.ಎಂ., ಉಣ್ಣಿಪ್ರಕಾಶ್, ದಾಸಂಡ ಜಗದೀಶ್, ದಾಸಂಡ ರಂಜನ್ ಮತ್ತಿತರರು ಯಶಸ್ವಿಯಾಗಿ ನಡೆಸಿದರು.








