
ಕುಶಾಲನಗರ ಆ.18 NEWS DESK : ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್, ಎನ್.ಎಸ್.ಎಸ್., ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಹಾಗೂ ಕುಶಾಲನಗರ ಸ್ಥಳೀಯ ಸಂಸ್ಥೆ ಶಾಲಾ ಘಟಕ, ಎಸ್. ಡಿ.ಎಂ.ಸಿ. ವಿದ್ಯಾರ್ಥಿ ಸಂಘ, ಕೂಡ್ಲೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ಕುಶಾಲನಗರ ಸ್ಥಳೀಯ ಸಂಸ್ಥೆ,ಕುಶಾಲನಗರ ಕಾವೇರಿ ಜೆಸಿಐ ಸಂಸ್ಥೆ ಹಾಗೂ ಲಯನ್ಸ್ ಕ್ಲಬ್ ನ ಸಹಯೋಗದೊಂದಿಗೆ 79ನೇ ಸ್ವಾತಂತ್ರ್ಯೋತ್ಸವ ಹಾಗೂ ಗೋ ಗ್ರೀನ್ ಅಭಿಯಾನ:2025 ದ ಅಂಗವಾಗಿ “ವಿದ್ಯಾರ್ಥಿಗಳ ನಡಿಗೆ ಕೃಷಿಯೆಡೆಗೆ”ಎಂಬ ಘೋಷ ವಾಕ್ಯದೊಂದಿಗೆ ಕೂಡ್ಲೂರು ಗ್ರಾಮದಲ್ಲಿ ಕಾವೇರಿ ನದಿದಂಡೆಯ ಮೇಲಿನ ಹಸಿರು ಪರಿಸರದ ಮಧ್ಯೆ ಗ್ರಾಮದ ಪ್ರಗತಿಪರ ಕೃಷಿಕರಾದ ಕೆ.ಎಸ್.ರಾಜಾಚಾರಿ ಅವರ ಗದ್ದೆಯಲ್ಲಿ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಜನಪದ ಸಂಸ್ಕೃತಿಯ ಪ್ರತೀಕವಾದ 4ನೇ ವರ್ಷದ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟ ಗಮನ ಸೆಳೆಯಿತು. ಮಳೆಯ ಸಿಂಚನದೊಂದಿಗೆ ಆಗಾಗ್ಗೆ ಬಿಸಿಲಿನ ವಾತಾವರಣದಲ್ಲಿ ವಿದ್ಯಾರ್ಥಿಗಳು ಗದ್ದೆಯ ಕೆಸರಿನಲ್ಲಿ ಮಿಂದು ಎದ್ದು ಕೆಸರು ಮಣ್ಣಿನ ಸ್ಪರ್ಶ ಅನುಭವ ಪಡೆದರು. ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ, ಜನಪದ ಶೈಲಿಯ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟವನ್ನು ವಿದ್ಯಾರ್ಥಿಗಳಲ್ಲಿ ಕೃಷಿ ಚಟುವಟಿಕೆಗಳು, ರೈತರ ಕೃಷಿ ಬದುಕು, ದೇಶದ ಕೃಷಿ ಜೀವನ ಬಗ್ಗೆ ಅರ್ಥ ಮಾಡಿಕೊಳ್ಳುವ ದಿಸೆಯಲ್ಲಿ ಏರ್ಪಡಿಸಿರುವ ಕ್ರೀಡೆಗಳು ವಿದ್ಯಾರ್ಥಿಗಳಿಗೆ ಕೃಷಿ ಪರಿಚಯ ಮಾಡಿಕೊಡಲು ಸಹಕಾರಿಯಾಗಿವೆ ಎಂದರು. ಶಾಲೆಯಲ್ಲಿ ಮಕ್ಕಳಿಗೆ ಕ್ರೀಡಾಕೂಟ ಸೇರಿದಂತೆ ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಲ್ಲಿ ಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮತ್ತು ಶಿಕ್ಷಕರ ಪ್ರೇರೇಪಣೆ ಮತ್ತು ಕಾರ್ಯಕ್ಷಮತೆಯು ಅನುಕರಣೀಯವಾದುದು. ಇದರಿಂದ ಮಕ್ಕಳಿಗೆ ಕೃಷಿ ಪಾಠದ ಮಹತ್ವ ತಿಳಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ರೈತ ದೇಶದ ಬೆನ್ನೆಲಬು. ರೈತರ ಜೀವನಕ್ರಮ, ರೈತರು ಕೃಷಿ ಕಾರ್ಯದಲ್ಲಿ ಎದುರಿಸುವ ಕಷ್ಟ-ಕಾರ್ಪಣ್ಯಗಳು, ರೈತರ ಕೃಷಿ ಪದ್ಧತಿ ಬಗ್ಗೆ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಸ್ವತಃ ಅನುಭವ ಪಡೆಯಲು ಇಂತಹ ಕ್ರೀಡೆಗಳು ಸಹಕಾರಿಯಾಗಿವೆ ಎಂದು ಬೇಬಿಮ್ಯಾಥ್ಯೂ ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಕೆಸರು ಗದ್ದೆ ಕ್ರೀಡೆಯ ಮಹತ್ವದ ಕುರಿತು ಮಾಹಿತಿ ನೀಡಿದರು. ಶಾಲಾ ಮಕ್ಕಳಿಗೆ ಶಾಲೆಯ ಹೊರಗಿನ ಪರಿಸರದಲ್ಲಿ ಪಠ್ಯದ ಜತೆಗೆ ಇಂತಹ ಕ್ರೀಡಾ ಚಟುವಟಿಕೆಗಳ ಮೂಲಕ ರೈತರ ಬದುಕು ಹಾಗೂ ಕೃಷಿಪಾಠದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ನ ಕುಶಾಲನಗರ ಸ್ಣಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ ಮಾತನಾಡಿ, ಕೆಸರುಗದ್ದೆ ಕ್ರೀಡೆಯಲ್ಲಿ ಮಕ್ಕಳು ಸಂತಸ, ಸಂಭ್ರಮಮತ್ತು ಖುಷಿಯಿಂದ ಪಾಲ್ಗೊಂಡಿರುವುದು ಸಂತಸ ತಂದಿದೆ. ಈ ಶಾಲೆಯ ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜತೆಗೆ ಈ ರೀತಿಯಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಿರುವುದು ಮೆಚ್ಚುಗೆಯ ಸಂಗತಿಯಾಗಿದೆ ಎಂದರು.ಗ್ರಾಮೀಣ ಭಾಗದ ಮಣ್ಣಿನ ಪರಿಮಳವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಸರುಗದ್ದೆ ಕ್ರೀಡೆಯು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿದೆ ಎಂದರು. ಗ್ರಾಮದ ಬಸವೇಶ್ವರ ದೇವಸ್ಥಾನ ಸಮಿತಿಯ ಕಾರ್ಯದರ್ಶಿಯೂ ಆದ ಲಯನ್ಸ್ ಕ್ಲಬ್ ನ ಉಪಾಧ್ಯಕ್ಷ ಕೆ.ಎನ್.ಪವನ್ ಕುಮಾರ್ ಮಾತನಾಡಿ, ಶಾಲೆಯ ಹೊರಾಂಗಣದ ಇಂತಹ ಚಟುವಟಿಕೆಗಳಿಗೆ ಗ್ರಾಮದಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಇಂತಹ ಕ್ರೀಡಾಕೂಟವನ್ನು ನಿರಂತರವಾಗಿ ಮುಂದುವರೆಸಲು ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು. ಗದ್ದೆಯ ಮಾಲೀಕರೂ ಆದ ಪ್ರಗತಿ ಪರ ಕೃಷಿಕ ಕೆ.ಎಸ್. ರಾಜಾಚಾರಿ ಮಾತನಾಡಿ, ನಮ್ಮ ಗದ್ದೆಯಲ್ಲಿ ಈ ಶಾಲೆಯ ವತಿಯಿಂದ 4 ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಏರ್ಪಡಿಸಿದ್ದು, ಮಕ್ಕಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ಕೃಷಿ ಚಟುವಟಿಕೆಗಳ ಬಗ್ಗೆ ಅನುಭವ ಪಡೆಯುತ್ತಿದ್ದಾರೆ. ಇದು ಮಕ್ಕಳಿಗೆ ದೇಶದ ಕೃಷಿ ಬಗ್ಗೆ ಜ್ಞಾನ ಹೊಂದಲು ಸಹಕಾರಿಯಾಗಿವೆ ಎಂದರು. ಕೂಡಿಗೆ ಡಯಟ್ ಸಂಸ್ಥೆಯ ಉಪನ್ಯಾಸಕಿ ಎಂ.ಲತಾ ಮಾತನಾಡಿ, ಈ ಶಾಲೆಯಲ್ಲಿ ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಕ್ರಿಯಾಶೀಲ ಚಟುವಟಿಕೆಗಳನ್ನು ಬೆಳೆಸುವ ದಿಸೆಯಲ್ಲಿ ಸಂಭ್ರಮದ ಶನಿವಾರ ಕಾರ್ಯಕ್ರಮದಡಿ ಕೆಸರುಗದ್ದೆ ಕ್ರೀಡೆ ಸೇರಿದಂತೆ ವಿವಿಧ ರಚನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯವಾದುದು ಎಂದರು. ಕೂಡಿಗೆ ಸರ್ಕಾರಿ ಪಿಯೂ ಕಾಲೇಜಿನ ಪ್ರಾಂಶುಪಾಲ ಎಚ್.ಜೆ.ನಾಗರಾಜ್ ಹಂಡ್ರಂಗಿ, ಮಕ್ಕಳಿಗೆ ದೇಶದ ಕೃಷಿ ಪದ್ಧತಿ ಹಾಗೂ ರೈತರ ಬದುಕಿನ ಬಗ್ಗೆ ತಿಳಿಸಿದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಮಾತನಾಡಿ, ಮಕ್ಕಳು ಇಂತಹ ಕ್ರೀಡೆಯಲ್ಲಿ ಸಂತಸ ಖುಷಿಯಿಂದ ಪಾಲ್ಹೊಳ್ಳುವ ಮೂಲಕ ಕೃಷಿಪಾಠದ ಬಗ್ಗೆ ಅನುಭವ ಪಡೆಯುತ್ತಾರೆ ಎಂದರು. ಲಯನ್ಸ್ ಕ್ಲಬ್ ನ ಅಧ್ಯಕ್ಷ ಎನ್.ಟಿ.ನಾರಾಯಣ್ ಮಾತನಾಡಿ, ಇಂತಹ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ ಅಗತ್ಯ ಎಂದರು. ಪ್ರಗತಿಪರ ಕೃಷಿಕ ಕೆ.ಎಸ್.ರಾಜಾಚಾರಿ, ಕೂಡಿಗೆ ಸರ್ಕಾರಿ ಪಿಯೂ ಕಾಲೇಜಿನ ಪ್ರಾಂಶುಪಾಲ ಎಚ್.ಜೆ.ನಾಗರಾಜ್ ಹಂಡ್ರಂಗಿ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸಿ.ಟಿ.ಸೋಮಶೇಖರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಎಂ.ಎನ್.ಕಾಳಪ್ಪ, ಎಂ.ಎನ್.ಮೂರ್ತಿ, ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ, ಕಾರ್ಯದರ್ಶಿ ಎಂ.ಎಸ್.ಗಣೇಶ್, ಎಸ್ ಡಿ ಎಂ ಸಿ ಸದಸ್ಯ ಎಂ.ರಂಗಸ್ವಾಮಿ, ಸ್ಕೌಟ್ಸ್ ಮಾಸ್ಟರ್ ಗಳಾದ ಡಿ.ವಿ.ಗಣೇಶ್, ಬಿ.ಕೆ.ಗಣೇಶ್, ಕುಶಾಲನಗರ ಲಯನ್ಸ್ ಕ್ಲಬ್ ನ ಅಧ್ಯಕ್ಷ ಎನ್.ಟಿ.ನಾರಾಯಣ್, ಉಪಾಧ್ಯಕ್ಷ ಕೆ.ಎನ್.ಪವನ್ ಕುಮಾರ್, ಕಾರ್ಯದರ್ಶಿ ಸದಸ್ಯರಾದ ಸುಮನ್, ಕೊಡಗನ ಹರ್ಷ, ಸತೀಶ್, ಶಾಲಾ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್, ಬಿ.ಎನ್. ಸುಜಾತ, ಬಿ.ಡಿ. ರಮ್ಯ, ಎಸ್.ಎಂ.ಗೀತಾ ಕೆ.ಟಿ.ಸೌಮ್ಯ, ಬಿ.ಎಸ್.ಅನ್ಸಿಲಾ ರೇಖಾ, ಸಿಬ್ಬಂದಿ ಎಂ.ಉಷಾ, ಚೆಸ್ ಆಟಗಾರ್ತಿ ಎನ್.ಎನ್.ಮಾನಸ, ಶಾಲಾ ವಿದ್ಯಾರ್ಥಿಗಳು, ಕೃಷಿಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಇದೇ ವೇಳೆ ಪ್ರಗತಿಪರ ಕೃಷಿಕರಾದ ಕೆ.ಎಸ್.ರಾಜಾಚಾರಿ ಅವರಿಗೆ ಫಲ ತಾಂಬುಲ ನೀಡಿ ಸನ್ಮಾನಿಸಿ ಗೌರವಿಸಲಾಯಿತು.









