
ಮಡಿಕೇರಿ NEWS DESK ಆ.18 : ಕೊಡಗು ಜಿಲ್ಲೆಯಲ್ಲಿ ಚಳಿ, ಗಾಳಿ, ಮಳೆ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಆ.19 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಆದೇಶಿಸಿದ್ದಾರೆ. ಮಡಿಕೇರಿ ತಾಲ್ಲೂಕು ಮತ್ತು ದಕ್ಷಿಣ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲಾ ವ್ಯಾಪಿ ಮೈಕೊರೆಯುವ ಚಳಿ ಇದೆ. ಮಂಜು ಕವಿದ ವಾತಾವರಣದಿಂದ ತಿರುವಿನ ರಸ್ತೆಗಳಲ್ಲಿ ವಾಹನ ಚಾಲನೆ ಕಷ್ಟವಾಗುತ್ತಿದ್ದು, ಚಾಲಕನ ನಿಯಂತ್ರಣ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಬಸ್ ವೊಂದು ಬರೆಗೆ ಗುದ್ದಿದ ಘಟನೆ ಮುಟ್ಲು ಗ್ರಾಮದಲ್ಲಿ ನಡೆದಿದೆ. ಮರಳು ತುಂಬಿದ ಲಾರಿಯೊಂದು ಮಗುಚಿದ ಘಟನೆ ಮಡಿಕೇರಿ ಸಮೀಪ ಕೂಟುಹೊಳೆ ರಸ್ತೆಯಲ್ಲಿ ನಡೆದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಕತ್ತಲೆಕಾಡು ಗ್ರಾಮದಲ್ಲಿ ಮತ್ತು ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ತ್ಯಾಗತ್ತೂರು ಚೆಟ್ಟಳ್ಳಿ ರಸ್ತೆಯಲ್ಲಿ ಬೃಹತ್ ಮರಗಳು ಬಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಗ್ರಾಮೀಣ ಭಾಗದಲ್ಲಿ ಮರ ಮತ್ತು ವಿದ್ಯುತ್ ಕಂಬಗಳು ಬಿದ್ದು ಹಾನಿ ಉಂಟಾಗಿದೆ. ನಿರಂತರ ಮಳೆಯಿಂದ ಜಿಲ್ಲೆಯ ಬಹುತೇಕ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ. ಮಡಿಕೇರಿ ನಗರದಲ್ಲಿ ಮೈಕೊರೆಯುವ ಚಳಿ, ಮಂಜು ಮತ್ತು ನಿರಂತರ ಮಳೆಯ ವಾತಾವರಣವಿದ್ದು, ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂಪಾಜೆ, ಭಾಗಮಂಡಲ, ಶ್ರೀಮಂಗಲ, ಹುದಿಕೇರಿ, ಶಾಂತಳ್ಳಿ ಮತ್ತು ಕೊಡ್ಲಿಪೇಟೆ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಮಳೆ 2390.66 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2402.90 ಮಿ.ಮೀ ಮಳೆಯಾಗಿತ್ತು. *ಹಾರಂಗಿ ಜಲಾಶಯದ ನೀರಿನ ಮಟ್ಟ*
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳು, ಇಂದಿನ ನೀರಿನ ಮಟ್ಟ 2857.02 ಅಡಿಗಳು. ಕಳೆದ ವರ್ಷ ಇದೇ ದಿನ 2857.63 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 21.40 ಮಿ.ಮೀ., ಇಂದಿನ ನೀರಿನ ಒಳಹರಿವು 9735 ಕ್ಯುಸೆಕ್, ಕಳೆದ ವರ್ಷ ಇದೇ ದಿನ 1737 ಕ್ಯುಸೆಕ್., ಇಂದಿನ ನೀರಿನ ಹೊರ ಹರಿವು ನದಿಗೆ 9916 ಕ್ಯುಸೆಕ್. ನಾಲೆಗೆ 500 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 1191 ಕ್ಯುಸೆಕ್. ನಾಲೆಗೆ 200 ಕ್ಯುಸೆಕ್.









