ಬೆಳಗಾವಿ ಆ.28 NEWS DESK : ಬಡೇಕೊಳ್ಳ ಕ್ರಾಸ್ ಬಳಿ ಬುಧವಾರ ರಾತ್ರಿ ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 11 ಪ್ರಯಾಣಿಕರು ಗಾಯಗೊಂಡಿದ್ದಾರೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿಯಿಂದ ಪುಣೆಯತ್ತ ಹೊರಟಿದ್ದ ಗೋಗಟೆ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್‌ನಲ್ಲಿ ಒಟ್ಟು 12 ಜನರು ಪ್ರಯಾಣಿಸುತ್ತಿದ್ದು, ಇದರಲ್ಲಿ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಉಳಿದವರಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಕೆಲವು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ಬಸ್ ಚಾಲಕನ ಅಜಾಗರೂಕ ಚಾಲನೆ ಈ ಅಪಘಾತಕ್ಕೆ ಪ್ರಮುಖ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ. ಬಸ್ ಘಾಟ್ ಪ್ರದೇಶದಲ್ಲಿ ತೀವ್ರ ತಿರುವು ತೆಗೆದುಕೊಳ್ಳುವ ವೇಳೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.










