
ವಿರಾಜಪೇಟೆ ಆ.28 NEWS DESK : ಬೆಂಗಳೂರು ಮೂಲದ ಸಿಸ್ಕೋ ಸಂಸ್ಥೆಯ 85 ಮಂದಿ ಸ್ವಯಂ ಸೇವಕರು ಜಾಗೃತಿ ಟ್ರಸ್ಟ್ ನೊಂದಿಗೆ ಕೈಜೋಡಿಸಿ, ವಿರಾಜಪೇಟೆಯ ಆಯ್ದ ಸರಕಾರಿ ಶಾಲೆಗಳ ಮಕ್ಕಳಿಗೆ ಕಲಿಕೆಯ ಅನುಭವ ನೀಡಿದರು. ಸರಕಾರಿ ಮಾದರಿ ಪ್ರಾಥಮಿಕ ಅಮ್ಮತ್ತಿ, ಹೊಸೂರು, ಸಿದ್ದಾಪುರ, ಬಿಳುಗುಂದ, ನಲ್ವತೋಕ್ಲು ಈ 5 ಸರಕಾರಿ ಶಾಲೆಗಳ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಮನರಂಜನೆಯ ಕ್ರೀಡೆಗಳನ್ನು ನಡೆಸಿ ಭಾಗವಹಿಸಿದ ಮತ್ತು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. ಹೈಜೀನ್ ಕಿಟ್‍ಗಳ ವಿತರಣೆಯೊಂದಿಗೆ ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ಕಲಿಕೋಪಕರಣ ಸಾಮಾಗ್ರಿ, ಬ್ಯಾಂಡ್ ಸೆಟ್ ಕೊಡುಗೆ ನೀಡಲಾಯಿತು. ಪರಿಸರ ಸಂರಕ್ಷಣೆಯ ಅರಿವು ಮೂಡಿಸಲು ಕಾಂಪೋಸ್ಟ್ ಗುಂಡಿ ನಿರ್ಮಿಸಲಾಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಾದ ಸಿದ್ದಾಪುರ, ಹೊಸೂರು ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಹೆಗ್ಗಳ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿ, ವಿಜ್ಞಾನ ಕಲಿಕೋಪಕರಣ ತಯಾರಿಸಿ, ಕ್ರೀಡಾ ಉಪಕರಣ ನೀಡುವುದರ ಮೂಲಕ ಮಕ್ಕಳಲ್ಲಿ ಕ್ರೀಡಾ ಉತ್ಸಾಹ ಮತ್ತು ಕಲಿಕೆಯ ಆಸಕ್ತಿ ಮೂಡಿಸಿದರು ಮತ್ತು ಶಾಲೆಗಳ ಗೋಡೆಗಳಿಗೆ ಬಣ್ಣ ಬಳಿದು ವರ್ಲಿ ಕಲಾ ಚಿತ್ರಗಳನ್ನು ಬಿಡಿಸಿ ಶಾಲಾ ವಾತಾವರಣವನ್ನು ಸುಂದರಗೊಳಿಸಿದರು. ಈ ಸಂದರ್ಭ ಸ್ವಯಂ ಸೇವಕ ವಿಷ್ಣು ಮಾತನಾಡಿ, ಇದು ಸಹಾನುಭೂತಿ ಮತ್ತು ಕ್ರಿಯಾಶೀಲತೆಯ ಚಲನೆ ಎಂದು ಹೇಳಿದರು. ಸ್ಥಳೀಯ ಪೋಷಕರು, ನಮ್ಮ ಮಕ್ಕಳು ಗೌರವಿತರಾಗಿದ್ದಾರೆ ಎಂಬ ಭಾವನೆ ಮೂಡಿದೆ. ಇದು ಸಹಾಯವಲ್ಲ, ಇದು ಪ್ರೀತಿಯ ಕೆಲಸ ಎಂದರು. ಕಾರ್ಯಕ್ರಮ ಸಂಯೋಜಕ ಸಂಪತ್ ಬಾನಂಡ ಮಾಹಿತಿ ನೀಡಿ, ಪ್ರತಿಯೊಬ್ಬ ಮಕ್ಕಳನ್ನು ಗೌರವದಿಂದ ಕಾಣಬೇಕು, ಪ್ರೇರಣೆಯೊಂದಿಗೆ ಉತ್ಸಾಹ ಮೂಡಿಸಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು. ಈ ಕ್ಷಣಗಳು ಮಕ್ಕಳ ಮನಸ್ಸಿನಲ್ಲಿ ಉಳಿಯಬೇಕು, ಎಂದು ಸಿಸ್ಕೋ ಸ್ವಯಂಸೇವಕ ಮತ್ತು ಸ್ಥಳೀಯ ನಿವಾಸಿ ಮಚ್ಚಾರಂಡ ಅಯ್ಯಪ್ಪ ಹೇಳಿದರು. ಜಾಗೃತಿ ಟ್ರಸ್ಟ್ ನ ಕೋಶಾಧಿಕಾರಿಗಳಾದ ಕೊಂಡಿಂಜಮ್ಮಂಡ ಶರಣು, ಕಣ್ಣನ್, ನೋಯಲ್, ಜಾಗೃತಿ ಟ್ರಸ್ಟ್‍ನ ಸಂಸ್ಥಾಪಕರಾದ ರೇಣು ಅಪ್ಪಚ್ಚು, ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.









