
ಸುಂಟಿಕೊಪ್ಪ ಜು.4 NEWS DESK : ಪತ್ರಿಕೆಗಳು ಸಮಾಜದ ಕೈಗನ್ನಡಿಯಾಗಿದ್ದು ಪತ್ರಕರ್ತರ ಮೇಲೆ ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ ಎಂದು ಐಶ್ವರ್ಯ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಅಮ್ಮಾಟಂಡ ಎ.ಜೋಯಪ್ಪ ಅಭಿಪ್ರಾಯ ಪಟ್ಟರು. ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಗುಡ್ಡೆಹೊಸೂರಿನ ಐಶ್ವರ್ಯ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮತ್ತು ಜ್ಞಾನ ಗಂಗಾ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಇಂದು ಪತ್ರಿಕಾರಂಗ ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗಾಗಿ ಗೌರವಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ವಿವಿಧ ಮಾಧ್ಯಮಗಳು ನೀಡುವ ಸುದ್ದಿಗಳೆಲ್ಲಾ ವಾಸ್ತವ ಎಂದು ನಂಬುವ ಪರಿಸ್ಥಿತಿಯಿದೆ ಆದರೆ ಮುದ್ರಣ ಮಾಧ್ಯಮ ಈ ಪೈಕಿ ಹೆಚ್ಚು ವಿಶ್ವಾಸ ಅರ್ಹತೆಯನ್ನು ಉಳಿಸಿಕೊಂಡಿದೆ ಎಂದು ಶ್ಲಾಘಿಸಿದರು. ದಿನದ ಮಹತ್ವದ ಕುರಿತು ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಎಸ್.ಜಿ.ಉಮೇಶ್ ಮಾತನಾಡಿ, ರಾಷ್ಟ್ರ ಮತ್ತು ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಂಪನ್ಮೂಲ ಆಕರಗಳಾಗಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸುತ್ತ್ತಿವೆ. ಪತ್ರಿಕೆಗೆಗಳು ಕೇವಲ ರಾಜಕೀಯ ಅಥವಾ ವ್ಯಕ್ತಿಗತ ವಿಷಯಾಧಾರಿತವಾಗಿರದೆ ಜೀವನದ ಎಲ್ಲಾ ಆಯಾಮಗಳನ್ನು ಸ್ಪರ್ಶಿಸುವ ಪ್ರಭಾವಿಸುವ ಶಕ್ತಿಯನ್ನು ಹೊಂದಿದೆ ಎಂದು ವಿಶ್ಲೇಷಿಸಿದರು. ಶಾಲಾ ಕಾಲೇಜು ಹಂತದಲ್ಲಿ ಪಠ್ಯ ಪುಸ್ತಕಗಳ ಹುಳುಗಳಾಗದೆ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರಮುಖವಾಗಿ ಶಾಲಾ ಗ್ರಂಥಾಲಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡು ಜೀವನದಲ್ಲಿ ಪ್ರಭಾವಶಾಲಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರಲ್ಲದೆ, “ಕೌಶಲ್ಯ”ಗಳ ಅಭಿವೃದ್ಧಿಗೆ ಶಿಕ್ಷಣದ ಹಂತದಲ್ಲೆ ಕಾಳಜಿ ವಹಿಸುವಂತೆ ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ., ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರರಿಂದ ಹಿಡಿದು ಪ್ರಸ್ತುತ ಪತ್ರಿಕೋದ್ಯಮದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿ ಸುದ್ದಿ ಇಲ್ಲದ ಪ್ರಪಂಚ ಶೂನ್ಯ ಎಂದು ಹೇಳಿ, ಎಷ್ಟೇ ಡಿಜಿಟಲೀಕರಣ ಆದರೂ ಕೂಡ ಮುದ್ರಣ ಮಾಧ್ಯಮಕ್ಕೆ ಅಳಿವಿಲ್ಲ ಎಂದು ಪ್ರತಿಪಾದಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಆರ್ ಸುನಿಲ್ ಕುಮಾರ್ ಮತ್ತು ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಪಿ.ಎಫ್. ಸಬಾಸ್ಟಿನ್ ಮಾತನಾಡಿದರು. :: ಪ್ರಶಸ್ತಿ ಪ್ರದಾನ :: ಕಾರ್ಯಕ್ರಮದಲ್ಲಿ ಜ್ಞಾನ ಗಂಗಾ ದತ್ತಿನಿಧಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತರಾದ ಎಂ.ಬಿ. ವಿನ್ಸೆಂಟ್ ಅವರಿಗೆ ಗಣ್ಯರು ಪ್ರದಾನ ಮಾಡಿ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷ ಬಿ.ಸಿ. ದಿನೇಶ್ ವಹಿಸಿದ್ದರು.ವೇದಿಕೆಯಲ್ಲಿ ಕೊಡಗು ಪತ್ರಕರ್ತರ ಸಂಘದ ಖಜಾಂಚಿ ಸಂತೋಷ್ ಟಿ.ಕೆ.ಉಪಸ್ಥಿತರಿದ್ದರು. ತಾಲೂಕು ಸಂಘದ ಉಪಾಧ್ಯಕ್ಷ ನವೀನ್ ಚಿಣ್ಣಪ್ಪ ಪ್ರಾರ್ಥಿಸಿ, ಖಜಾಂಚಿ ಕೆ.ಎಸ್.ಅನಿಲ್ ಕುಮಾರ್ ಸ್ವಾಗತಿಸಿ,ಗೌರವ ಸಲಹೆಗಾರ ಕೆ.ತಿಮ್ಮಪ್ಪ ನಿರೂಪಿಸಿ, ಜಿಲ್ಲಾ ನಿರ್ದೇಶಕ ಗುಡ್ಡೆಮನೆ ವಿಶ್ವಕುಮಾರ್ ವಂದಿಸಿದರು.









