
ಮಡಿಕೇರಿ ಸೆ.9 NEWS DESK : ರಾಜ್ಯ ಸರಕಾರದ ವತಿಯಿಂದ ಇದೇ ಸೆ.22 ರಿಂದ ಕರ್ನಾಟಕದ ಸಮಗ್ರ ಜನತೆಯ ಜಾತಿ ಜನಗಣತಿ ನಡೆಯಲಿದ್ದು, ಒಕ್ಕಲಿಗ ಜನಾಂಗದವರು ತಪ್ಪದೇ ಒಕ್ಕಲಿಗ ಎಂದು ತಮ್ಮ ಜಾತಿಯನ್ನು ಬರೆಸುವಂತೆ ಮತ್ತು ಎಲ್ಲಾ ಮಾಹಿತಿಗಳನ್ನು ತಪ್ಪಿಲ್ಲದಂತೆ ನೀಡುವಂತೆ ಒಕ್ಕಲಿಗರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ ಅವರು ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರಕಾರ ಮುಂದಿನ ದಿನಗಳಲ್ಲಿ ಯೋಜನೆ ಅಥವಾ ಕಾರ್ಯಕ್ರಮ ರೂಪಿಸುವಾಗ ಜಾತಿ ಜನಗಣತಿಯ ದತ್ತಾಂಶ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಯಾವುದೇ ಕಾರಣಕ್ಕೂ ತಪ್ಪು ಮಾಹಿತಿ ನೀಡಬಾರದು ಎಂದು ಕೋರಿದ್ದಾರೆ. ಗಣತಿದಾರರು ಮನೆಮನೆಗೆ ಬಂದಾಗ ಒಕ್ಕಲಿಗ ಜನಾಂಗದವರು ತಪ್ಪದೇ ಒಕ್ಕಲಿಗ ಎಂದು ಬರೆಸಬೇಕು. ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಒಕ್ಕಲಿಗ ಸಮುದಾಯದವರು ನಿಖರವಾದ ಮಾಹಿತಿಯನ್ನು ಸಂಪೂರ್ಣವಾಗಿ ನೀಡಬೇಕು. ಶಿಕ್ಷಣ, ಉದ್ಯೋಗ, ಆಸ್ತಿ, ಆರ್ಥಿಕ ಪರಿಸ್ಥಿತಿ ಮೊದಲಾದ ಮಾಹಿತಿಗಳನ್ನು ತಪ್ಪಾಗಿ ನೀಡದೆ ಸತ್ಯಾಂಶವನ್ನು ತಿಳಿಸಬೇಕು. ಯಾವುದೇ ಕಾರಣಕ್ಕೂ ಹೆಚ್ಚು ಕಡಿಮೆ ಮಾಡಬಾರದು ಮತ್ತು ಸುಳ್ಳು ಮಾಹಿತಿಯನ್ನು ನೀಡಬಾರದು. ಒಕ್ಕಲಿಗ ಜನಾಂಗದವರು ಗಣತಿಯಿಂದ ಹೊರಗೆ ಉಳಿಯಬಾರದು ಎಂದು ಸಲಹೆ ನೀಡಿದ್ದಾರೆ. ಸೆ.22ರಿಂದ ಅ.7ರವರೆಗೆ ಸಮೀಕ್ಷೆ ನಡೆಯಲಿದ್ದು, ಕುಟುಂಬದ ಎಲ್ಲಾ ಸದಸ್ಯರ ಮಾಹಿತಿಯನ್ನು ಸರಿಯಾಗಿ ನೀಡಬೇಕು. ವಿದ್ಯಾವಂತರು ತಮ್ಮ ತಮ್ಮ ಗ್ರಾಮಗಳಲ್ಲಿ ಒಕ್ಕಲಿಗ ಕುಟುಂಬಗಳಿಗೆ ತಿಳುವಳಿಕೆ ನೀಡಿ ಯಾರೊಬ್ಬರು ಗಣತಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು ಬರೆಸಿ ಉಪಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಉಪಜಾತಿಗಳ ಹೆಸರನ್ನು ಬರೆಸಬೇಕು ಅಥವಾ ಒಕ್ಕಲಿಗ ಎಂದೇ ಬರೆಸಬೇಕು ಎಂದು ಎಸ್.ಎಂ.ಚಂಗಪ್ಪ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸರಕಾರದ ವಿವಿಧ ಯೋಜನೆಗಳು, ಶಿಕ್ಷಣ, ಉದ್ಯೋಗ ಮತ್ತು ಹೆಚ್ಚಿನ ಸೌಲಭ್ಯಗಳು ಹಿಂದುಳಿದ ಜನಾಂಗಗಳ ಮೀಸಲಾತಿ ಆಧಾರದಲ್ಲಿ ಹಂಚಿಕೆಯಾಗುವುದರಿಂದ ಒಕ್ಕಲಿಗ ಸಮುದಾಯ ಸಮರ್ಪಕವಾಗಿ ಮಾಹಿತಿಯನ್ನು ಒದಗಿಸಬೇಕು ಎಂದು ಕೋರಿದ್ದಾರೆ.










