ಮಡಿಕೇರಿ ಸೆ.13 NEWS DESK : ನಗರದ ಶಾಂತಿನಿಕೇತನ ಬಡಾವಣೆಯ ಶಾಂತಿನಿಕೇತನ ಯುವಕ ಸಂಘದಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಉತ್ಸವ ಮೂರ್ತಿಯ ವಿಸರ್ಜನೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಮುಂಜಾನೆಯಿಂದಲೇ ಗೌರಿ-ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಗರದ ಗೌರಿಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು. : ಗಮನ ಸೆಳೆದ ಮಂಟಪ : ಗಣೇಶ ಮೂರ್ತಿ ವಿಸರ್ಜನೋತ್ಸವ ಅಂಗವಾಗಿ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ಲೋಕ ಕಲ್ಯಾಣಕ್ಕಾಗಿ ಗಣೇಶನಿಂದ ಶತಮಹಿಷಿಯನ್ನು ಸಂಹರಿಸುವ ಕಥಾ ಹಂದರ ಹೊಂದಿದ್ದ ಚಲನ ವಲನಗಳನ್ನೊಳಗೊಂಡ ಭವ್ಯ ಮಂಟಪದ ಪ್ರದರ್ಶನ ಜನಮನ ಸೂರೆಗೊಂಡಿತು. ಧ್ವನಿ ಬೆಳಕಿನ ಅಬ್ಬರದೊಂದಿಗೆ ಮಡಿಕೇರಿಯಲ್ಲಿ ಕಿನ್ನರ ಲೋಕವನ್ನೆ ಸೃಷ್ಟಿಸಿದಂತಿತ್ತು. ಶಾಂತಿಕೇತನ ಬಡಾವಣೆಯಿಂದ ಮುಖ್ಯ ರಸ್ತೆಯ ಒಂದು ಬದಿಯಲ್ಲಿ ಸಾಗಿಬಂದ ಶೋಭಾಯಾತ್ರೆ ಜನರಲ್ ತಿಮ್ಮಯ್ಯ ವೃತ್ತದ ಬಳಿ ಆಗಮಿಸುತ್ತಿರುವಂತೆ ಸಹಸ್ರಾರು ಮಂದಿ ನೆರೆದಿದ್ದರು. ಶೋಭಾಯಾತ್ರೆಯಲ್ಲಿ ಜನರು ಕುಣಿದು ಕುಪ್ಪಳಿಸಿದರು. ವಿಸರ್ಜನೋತ್ಸವ ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಆಗಮಿಸಿದ್ದರು.











