
ಮಡಿಕೇರಿ ಸೆ.30 NEWS DESK : ರಾಜ್ಯದ 183 ಪಿಕಾರ್ಡ್ ಬ್ಯಾಂಕುಗಳ ಪೈಕಿ ಮಡಿಕೇರಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ಗೆ ನಾಲ್ಕನೇ ಬಾರಿಗೆ ಕಾಸ್ಕಾರ್ಡ್ ಬ್ಯಾಂಕ್ ನೀಡುವ ಅತ್ಯುತ್ತಮ ಪ್ರಶಸ್ತಿ ಲಭಿಸಿದ್ದು, ವಸೂಲಾತಿಯಲ್ಲಿಯೂ ಎರಡು ಬಾರಿ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ತನ್ನ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಿಂದ ರಾಜ್ಯದ 183 ಬ್ಯಾಂಕ್‍ಗಳ ಪೈಕಿ ಮಡಿಕೇರಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಕಾಸ್ಕಾರ್ಡ್ ಬ್ಯಾಂಕ್ ನೀಡುವ ಅತ್ಯುತ್ತಮ ಪ್ರಶಸ್ತಿ ಭಾಜನವಾಗಿದೆ. ಈ ಸಾಲಿನಲ್ಲಿಯೂ ಎರಡು ಅತ್ಯುತ್ತಮ ಪ್ರಶಸ್ತಿಗಳಾದ ಶೇಕಡವಾರು ಅತೀ ಹೆಚ್ಚು ವಸೂಲಾತಿ (ಶೇ.98.60) ಹಾಗೂ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಅಲ್ಲದೆ ಜಿಲ್ಲಾ ಮಟ್ಟದಲ್ಲಿ ನೀಡುವ ಪ್ರಶಸ್ತಿಯನ್ನು 19ನೇ ಬಾರಿ ಪಡೆದಿದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಸ್ಕಾರ್ಡ್ ಬ್ಯಾಂಕ್ ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಗಿದ್ದು, ಕಾಸ್ಕಾರ್ಡ್ ಬ್ಯಾಂಕ್ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಷಡಕ್ಷರಿ, ಜಿಲ್ಲಾ ನಿರ್ದೇಶಕರು, ಶಾಸಕರಾದ ಎ.ಮಂಜು, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ವಿ.ಕೆ.ಪ್ರಸನ್ನ ಕುಮಾರ್ ಹಾಗೂ ಆಡಳಿತ ಮಂಡಳಿಯವರು ಹಾಜರಿದ್ದರು ಎಂದರು. ಬ್ಯಾಂಕ್ ಸತತವಾಗಿ ಹತ್ತೊಂಬತ್ತು ವರ್ಷಗಳಿಂದ ಲಾಭದಲ್ಲಿದ್ದು, ಸದಸ್ಯರಿಗೆ ಶೇ.8 ರಷ್ಟು ಡಿವಿಡೆಂಟ್ ನೀಡಿದೆ. ಅಲ್ಲದೆ ಆಕರ್ಷಕ ಬಡ್ಡಿ ದರದಲ್ಲಿ ನಿಶ್ಚಿತ ಠೇವಣಿಯನ್ನು ಪಡೆಯಲಾಗುತ್ತಿದೆ ಎಂದು ತಿಳಿಸಿದರು. ಬ್ಯಾಂಕ್ 2024-25ನೇ ಸಾಲಿನಲ್ಲಿ 89,15,56,631 ವ್ಯವಹಾರ ಮಾಡಿದೆ. ಬ್ಯಾಂಕಿನಲ್ಲಿ ಠೇವಣಿ ರೂ.10,51,03,560 ಠೇವಣಿ ಸಂಗ್ರಹವಾಗಿರುತ್ತದೆ. ಸಾಲದ ಹೊರಬಾಕಿ ರೂ.25,22,64,253 ಇದ್ದು, ಪ್ರಸಕ್ತ ಸಾಲಿನಲ್ಲಿ ರೂ.2,00,83,928 ರಷ್ಟು ಲಾಭ ಗಳಿಸಿದೆ ಎಂದು ಮನು ಮುತ್ತಪ್ಪ ಹೇಳಿದರು. 1957 ಫೆಬ್ರವರಿ 13 ರಂದು 25 ಸದಸ್ಯರ ರೂ.3,000 ಷೇರು ಬಂಡವಾಳದೊಂದಿಗೆ ಆರಂಭಗೊಂಡ ಮಡಿಕೇರಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ಇಂದು 2772 ಸದಸ್ಯರನ್ನು ಹೊಂದಿದ್ದು, ಪಾಲು ಬಂಡವಾಳ ರೂ.160.60 ಲಕ್ಷ ಇರುತ್ತದೆ. ತಾಲ್ಲೂಕಿನ ಖಾಲಿ ಜಮ್ಮಾ ಬಾಣೆ ಜಮೀನಿಗೆ ಸಾಲ ಸೌಲಭ್ಯವನ್ನು ನೀಡಿದ ಪ್ರಥಮ ಬ್ಯಾಂಕ್ ಆಗಿದ್ದು, ಇದರಿಂದ ತಾಲ್ಲೂಕಿನ ಸಾವಿರಾರು ಎಕರೆಯಲ್ಲಿ ಕಾಫಿ ತೋಟ ಹಾಗೂ ಕಾಳಮೆಣಸು, ಅಡಿಕೆ, ತೆಂಗು, ರಬ್ಬರ್ ಸಂಸ್ಕರಣ ಘಟಕ, ಟ್ರಾಕ್ಟ್‍ರ್, ಸ್ವೀಂಕ್ಲರ್ ಸೆಟ್, ವಾಹನ ಸಾಲ, ರಬ್ಬರ್ ತೋಟದ ಅಭಿವೃದ್ಧಿಗೆ ಇನ್ನಿತರ ಸಾಲ ನೀಡಿದೆ ಎಂದು ತಿಳಿಸಿದರು. ಇದರ ಜೊತೆಗೆ ಸಕಾಲದಲ್ಲಿ ಯಾವುದೇ ಪ್ರತಿಫಲಾಪೇಕ್ಷ ಇಲ್ಲದೆ ಸಾಲ ಮರುಪಾತಿ ಮಾಡುತ್ತೀರುವ ಸದಸ್ಯರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯದಲ್ಲಿಯೇ ಬ್ಯಾಂಕಾಗಿ ಚಾಲ್ತಿ ಕಂತನ್ನು ಮರುಪಾವತಿ ಮಾಡುವ ಸಾಲ ಪಡೆದ ಸದಸ್ಯರಿಗೆ ಲಾಭದಲ್ಲಿ ಕಾದಿರಿಸಿದ ಮೊಬಲಗಿನಿಂದ ರೂ.5 ಸಾವಿರ ವರೆಗೆ ಬಡ್ಡಿ ರಿಯಾಯ್ತಿ ನೀಡುತ್ತಿರುವುದು ಬ್ಯಾಂಕಿಗೆ ಹೆಗ್ಗಳಿಕೆಯಾಗಿದೆ ಎಂದರು. ಪ್ರತಿವರ್ಷ ಸಾಲ ಪಡೆದ ರೈತ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದು ಮನು ಮುತ್ತಪ್ಪ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ನ ಉಪಾಧ್ಯಕ್ಷ ನಾಪಂಡ ರ್ಯಾಲಿ ಮಾದಯ್ಯ, ನಿರ್ದೇಶಕರಾದ ಹೆಚ್.ಆರ್.ವಾಸಪ್ಪ, ಅಲ್ಲಾರಂಡ ಬೀನಾ ಬೊಳ್ಳಮ್ಮ, ಪ್ರಬಾರÀ ವ್ಯವಸ್ಥಾಪಕರಾದ ಕೆ.ಎನ್.ಸುಪರ್ಣ ಹಾಗೂ ಸಿಬ್ಬಂದಿ ತೊತ್ತಿಯನ ಎ.ಚಂದ್ರಶೇಖರ್ ಉಪಸ್ಥಿತರಿದ್ದರು.









