

ಮಡಿಕೇರಿ NEWS DESK ಸೆ.30 : ರಸ್ತೆ ಅವ್ಯವಸ್ಥೆ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಯಿಂದ ಮುಜುಗರಗೊಂಡಿರುವ ಕಾಂಗ್ರೆಸ್ಸಿಗರು ಜನರ ಹಾದಿ ತಪ್ಪಿಸುವುದಕ್ಕಾಗಿ ಅನುದಾನ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಕಟ್ಟುಕಥೆ ಹೇಳುತ್ತಿದ್ದಾರೆ. ಕಳೆದ 2 ವರ್ಷಗಳಲ್ಲಿ 1266 ಕೋಟಿ ರೂ. ಅನುದಾನ ಬಂದಿದ್ದರೆ ಅಭಿವೃದ್ಧಿ ಕಾರ್ಯಗಳನ್ನು ಸಾಕ್ಷೀಕರಿಸಲಿ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಆಗ್ರಹಿಸಿದ್ದಾರೆ
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಾಗ ಮತ್ತು ಸರಕಾರ ಹಾದಿ ತಪ್ಪಿದಾಗ ಎಚ್ಚರಿಸುವ ಕಾರ್ಯವನ್ನು ವಿರೋಧ ಪಕ್ಷಗಳು ಮಾಡುತ್ತವೆ. ಪ್ರಸ್ತುತ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ಕೂಡ ಇದನ್ನೇ ಮಾಡುತ್ತಿದೆ. ಪ್ರತಿಭಟನೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಮರೆತು ಜನರ ಹಿತವನ್ನು ಕಡೆಗಣಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಮರ್ಪಕವಾಗಿ ರಸ್ತೆಯನ್ನು ಅಭಿವೃದ್ಧಿ ಪಡಿಸದ ಜನಪ್ರತಿನಿಧಿಗಳು ಈಗ ಮಳೆಯ ನೆಪವೊಡ್ಡಿ ಕಾಲಹರಣ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ. 1266 ಕೋಟಿ ರೂ. ಅನುದಾನ ತಂದಿರುವುದಾಗಿ ಕಾಗದದ ಮೂಲಕ ತೋರಿಸುತ್ತಿರುವವರು ಈ ಅನುದಾನದಿಂದ ನಡೆದಿರುವ ಅಭಿವೃದ್ಧಿ ಕಾರ್ಯಗಳ ಕುರಿತು ದಾಖಲೆಯನ್ನು ಜನರ ಮುಂದಿಡಲಿ ಎಂದು ಸವಾಲು ಹಾಕಿದ್ದಾರೆ. ಕಿರುಗೂರು ಗ್ರಾಮದ ಗುಮ್ಮತ್ ಮಾಡ್ ರಸ್ತೆಯ ಅಭಿವೃದ್ಧಿಗೆ 30 ರಿಂದ 40 ಲಕ್ಷ ರೂ. ಅನುದಾನ ಬಂದಿದೆ ಎಂದು ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ಸಿಗರು ಪ್ರಚಾರ ಗಿಟ್ಟಿಸಿಕೊಂಡೇ ಬಂದಿದ್ದಾರೆ. ಆದರೆ ಇಲ್ಲಿಯವರೆಗೆ ರಸ್ತೆ ಕಾಮಗಾರಿ ಆರಂಭಗೊಂಡಿಲ್ಲ. ಕ್ರಿಯಾ ಯೋಜನೆಯನ್ನು ಒಂದು ಇಲಾಖೆಯಲ್ಲಿ ಮಾಡಿ ಅದನ್ನು ಕಾರ್ಯರೂಪಕ್ಕೆ ತಾರದೆ ಕಾಮಗಾರಿಯನ್ನು ಮತ್ತೊಂದು ಇಲಾಖೆಗೆ ವರ್ಗಾಯಿಸಿ ಸಮಯ ವ್ಯರ್ಥ ಮಾಡಲಾಗುತ್ತಿದೆ. ಹೀಗೆಯೇ ಅನೇಕ ರಸ್ತೆಗಳ ಪರಿಸ್ಥಿತಿ ಆಗಿದೆ. ಗುತ್ತಿಗೆದಾರರಿಗೆ ಹಿಂದೆ ನಡೆದಿರುವ ಕಾಮಗಾರಿಗಳ ಹಣವನ್ನೇ ಬಿಡುಗಡೆ ಮಾಡಿಲ್ಲ ಮತ್ತು ರಸ್ತೆ ಅಭಿವೃದ್ಧಿಯ ವಿಚಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ಬಗ್ಗೆ ರಾಜ್ಯ ಮಟ್ಟದಲ್ಲಿ ದೂರಿದೆ ಎಂದು ರಾಕೇಶ್ ದೇವಯ್ಯ ಆರೋಪಿಸಿದ್ದಾರೆ. ಬಾಕಿ ಹಣ ನೀಡದೆ ಇರುವುದರಿಂದ ರಸ್ತೆ ಕಾಮಗಾರಿ ನಡೆಯುತ್ತಿಲ್ಲ ಎನ್ನುವ ಸಂಶಯವಿದೆ. ಮಳೆಯ ನೆಪವೊಡ್ಡಿ ರಸ್ತೆಗಳನ್ನು ಅಭಿವೃದ್ಧಿ ಪಡಿಸದೆ ಇರುವುದು ಸರಿಯಾದ ಕ್ರಮವಲ್ಲ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಬಿಸಿಲೇ ಬರಲಿಲ್ಲವೇ ಎಂದು ಪ್ರಶ್ನಿಸಿರುವ ಅವರು ಸಾಧಾರಣ ಮಳೆಯಾಗುತ್ತಿರುವುದರಿಂದ ಕಾಂಕ್ರಿಟ್ ರಸ್ತೆಗಳ ಕಾಮಗಾರಿಯನ್ನಾದರೂ ಆರಂಭಿಸಿ ಜನರ ಮೇಲಿನ ಆಸಕ್ತಿಯನ್ನು ಸಾಬೀತು ಪಡಿಸಲಿ ಎಂದು ಒತ್ತಾಯಿಸಿದ್ದಾರೆ. *ಬೆಳೆಹಾನಿ ಪರಿಹಾರ ನೀಡಲಿ* ಕೊಡಗಿನಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿರುವುದಲ್ಲದೆ ಬೆಳೆಗಾರರ ಸಮಸ್ಯೆಗಳಿಗೆ ರೈತ ವಿರೋಧಿ ರಾಜ್ಯ ಸರಕಾರದಿಂದ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ. ಅತಿ ಮಳೆಯಿಂದ ಕಾಫಿ ಬೆಳೆ ನೆಲ ಕಚ್ಚಿದೆ, ಕಳೆದ 2 ವರ್ಷಗಳಿಂದ ಬೆಳೆಗಾರರಿಗೆ ಪರಿಹಾರವನ್ನೇ ನೀಡಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ವಾರ್ಷಿಕ ಒಬ್ಬ ರೈತನಿಗೆ 56 ಸಾವಿರ ರೂ. ವರೆಗೂ ಪರಿಹಾರ ನೀಡಿದೆ. ವಿರೋಧ ಪಕ್ಷದಲ್ಲಿರುವ ಬಿಜೆಪಿ ತನ್ನ ಜವಾಬ್ದಾರಿಯನ್ನು ಅರಿತು ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಜನರ ಮುಂದಿಡುವ ಸಲುವಾಗಿ ನಿರಂತರ ಪ್ರತಿಭಟನೆಗಳನ್ನು ನಡೆಸುತ್ತಾ ಬರುತ್ತಿದೆ. ಇದರಿಂದ ವಿಚಲಿತಗೊಂಡಿರುವ ಕಾಂಗ್ರೆಸ್ಸಿಗರು ಕಳೆದ 20 ವರ್ಷಗಳ ಕಟ್ಟು ಕಥೆಯನ್ನು ಹೇಳಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ರಾಕೇಶ್ ದೇವಯ್ಯ ಆರೋಪಿಸಿದ್ದಾರೆ.
ಬಿಜೆಪಿ ಮುಖಂಡರ ಮಾಹಿತಿ ನಮ್ಮ ಬಳಿ ಇದೆ ಎಂದು ಹೇಳಿಕೊಳ್ಳುತ್ತಿರುವವರು ಅದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.








