
ಮಡಿಕೇರಿ NEWS DESK ಅ.1 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ 50ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಬಿ.ಕೆ.ಜಗದೀಶ್ ತಿಳಿಸಿದ್ದಾರೆ. ಸಮಿತಿ ಈ ಬಾರಿ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ವಿಷ್ಣು ಪುರಾಣದಿಂದ ಆಯ್ದ ದೇವ-ದೇವತೆಗಳ ಕಾಳಗ, ಶರಬವತಾರ ಹಾಗೂ ಪ್ರತ್ಯುಂಗ ದೇವಿಯಿಂದ ನರಸಿಂಹನ ಉಗ್ರ ಶಮನ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್‌ನ ಕಳೆಯಗಂ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಬೆಂಗಳೂರಿನ ಪ್ರೀತಿ ಸೌಂಡ್ಸ್ ನ ಶಿವರಾಜ್ ಮತ್ತು ತಂಡ ಧ್ವನಿವರ್ಧಕ, ಸ್ಟುಡಿಯೋ ಹಾಗೂ ಫೈಯರ್ ಎಫೆಕ್ಟ್ ವ್ಯವಸ್ಥೆ ಮಾಡಲಿದೆ. ಈ ತಂಡಕ್ಕೆ ಸಮಿತಿ ಸದಸ್ಯರಾದ ಪ್ರಶಾಂತ್ ತಂಡ ಸಹಕಾರ ನೀಡಲಿದೆ. ಪ್ಲಾಟ್‌ಫಾರಂನ್ನು ಸಮಿತಿ ಸದಸ್ಯರೆ ನಿರ್ಮಿಸಲಿದ್ದು, ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಹಾಗೂ ಕಲಾಕೃತಿಗಳ ಚಲನ ವಲನ ವ್ಯವಸ್ಥೆಯನ್ನು ಸಮಿತಿ ಸದಸ್ಯರಾದ ಪ್ರಸಾದ್ ಆಚಾರ್ಯ, ಜಿ.ಸಿ.ಜಗದೀಶ್, ನಂದೀಶ್, ರಫೀಕ್, ಮನೋಜ್ ತಂಡ ಮಾಡಲಿದೆ. ಒಟ್ಟು 16 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಕಲಾಕೃತಿಗಳನ್ನು ಆರ್ವಿನ್, ರಾಕೇಶ್ ಹಾಗೂ ಸದಸ್ಯ ತಂಡ ಮತ್ತು ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ತಯಾರಿಸಲಿದ್ದಾರೆ. ಒಟ್ಟು ರೂ.30 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಕೇರಳದ ಪೂಕೋಡ್‌ನ ಬಾಬು ತಂಡದ ವಾದ್ಯಗೋಷ್ಠಿ ಮಂಟಪವನ್ನು ಮುನ್ನಡೆಸಲಿದೆ. ಜಿ.ಎಸ್.ಮಂಜುನಾಥ್ ಮಂಟಪದ ಉಸ್ತುವಾರಿ ನಿಭಾಯಿಸಲಿದ್ದಾರೆ ಎಂದು ಬಿ.ಕೆ. ಜಗದೀಶ್ ಮಾಹಿತಿ ನೀಡಿದರು.









