ಮಡಿಕೇರಿ ಅ.6 NEWS DESK : 2021ನೇ ಸಾಲಿನ ಸಿನಿಮಾಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ಕೊಡವ ಭಾಷೆಯ ‘ನಾಡ ಪೆದ ಆಶಾ’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ಪ್ರಶಸ್ತಿ ಲಭಿಸಿದೆ. ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರ ಕಾದಂಬರಿಯನ್ನು ಆಧರಿಸಿ ವಿಕೆ3 ಪಿಕ್ಚರ್ಸ್ ಬ್ಯಾನರಿನಡಿ ಈರಮಂಡ ಹರಿಣಿ ವಿಜಯ್ ಹಾಗೂ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರು ‘ನಾಡ ಪೆದ ಆಶಾ’ವನ್ನು ನಿರ್ಮಿಸಿದ್ದು, ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ನಿರ್ದೇಶಿಸಿದ್ದಾರೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಗ್ರಾಮೀಣ ಸೊಗಡನ್ನು ಸುಂದರವಾಗಿ ಬಿಂಬಿಸಲಾಗಿದೆ. ಕೊಡವ ಸಂಸ್ಕೃತಿ, ಉಡುಗೆ ತೊಡುಗೆ, ಸಂಪ್ರದಾಯ, ಆಚಾರ ವಿಚಾರಗಳನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಯುದ್ಧದಲ್ಲಿ ವೀರ ಯೋಧ ಪತಿಯನ್ನು ಕಳೆದುಕೊಳ್ಳುವ ಅಂಗನವಾಡಿ ಕಾರ್ಯಕರ್ತೆ ತನ್ನ ಬದುಕಿನ ಕಹಿ ಘಟನೆಯ ನಡುವೆಯೂ ಕರ್ತವ್ಯ, ಸಾಮಾಜಿಕ ಪ್ರಜ್ಞೆ, ಮನೆ ಮತ್ತು ಕುಟುಂಬವನ್ನು ಯಶಸ್ವಿಯಾಗಿ ನಿಭಾಯಿಸುವ ಕಥಾಹಂದರವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. 2021 ರ ಫೆಬ್ರವರಿ ತಿಂಗಳಿನಲ್ಲಿ 15 ದಿನಗಳ ಕಾಲ ಹಗಲುರಾತ್ರಿ ಎನ್ನದೆ ಸುಮಾರು 35 ತಂತ್ರಜ್ಞರನ್ನೊಳಗೊಂಡ ಚಿತ್ರ ತಂಡ ಕೊಡಗಿನ ಮೂರ್ನಾಡು, ಬೇತ್ರಿ, ಬಲಮುರಿ, ಕಡಗದಾಳು, ಸೋಮವಾರಪೇಟೆ, ಕೋಟೆಬೆಟ್ಟ, ಮಡಿಕೇರಿ, ನಾಪೋಕ್ಲು, ಬೊಳಿಬಾಣೆ, ಮೊಕ್ಕೋಲಿ ರೆಸಾರ್ಟ್, ನೆಲ್ಲಿಮಾನಿ ರೆಸಾರ್ಟ್, ಬೇತ್ರಿ ಮುಕ್ಕಾಟಿರ ಐನ್ ಮನೆ ಸೇರಿದಂತೆ ವಿವಿಧ ಸ್ಥಳಗಳ ಪ್ರಕೃತಿಯ ಸೌಂದರ್ಯದಲ್ಲಿ ಚಿತ್ರೀಕರಣ ನಡೆಸಲಾಯಿತು. ‘ನಾಡ ಪೆದ ಆಶಾ’ ಬಿಡುಗಡೆಯಾದ ನಂತರ ಕೊಡಗಿನ ಎಲ್ಲೆಡೆ ಎಲ್‍ಇಡಿ ಪರದೆಯ ಮೇಲೆ 123 ಪ್ರದರ್ಶನ ಕಂಡು ಜನಮೆಚ್ಚುಗೆ ಪಡೆಯಿತು. ಅಲ್ಲದೆ ಹಲವು ಅಂತರ ರಾಷ್ಟ್ರೀಯ ಚಲಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗಳನ್ನು ಕೂಡ ಗೆದ್ದುಕೊಂಡಿದೆ. 7ನೇ ಡೆಹ್ರಡೂನ್, 2ನೇ ಚಂಢೀಗಡ್, 27ನೇ ಕೊಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ, ಮೈಸೂರು ದಸರಾ ಚಲನಚಿತ್ರೋತ್ಸವ-2022 ರಲ್ಲಿ ಪ್ರದರ್ಶನಗೊಂಡಿದೆ. ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2022 ರಲ್ಲಿ ‘ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ’, ಬೆಂಗಳೂರಿನ ಪನೋರಮಾ ಸಿನಿಮೋತ್ಸವದಲ್ಲಿ ‘ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ’, ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ‘ಬೆಸ್ಟ್ ಸೋಶಿಯಲ್ ಫಿಲಂ ಪ್ರಶಸ್ತಿ’ ಲಭಿಸಿದೆ. ಅಸ್ಸಾಂ, ಮಣಿಪುರ, ಇಂಪಾಲ, ಹೈದರಾಬಾದ್, ಮುಂಬೈ, ತಮಿಳುನಾಡು, ಮಧ್ಯಪ್ರದೇಶ, ದೆಹಲಿ, ರಾಜಸ್ಥಾನ, ಕೊಲ್ಕೋತ್ತ ಯುಕೆ, ನೇಪಾಳ, ಯುರೋಪ್, ಬೆಲ್ಜಿಯಂನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಚಲಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಅತ್ಯುತ್ತಮ ನಟಿ ಪ್ರಶಸ್ತಿ, ಅತ್ಯುತ್ತಮ ನಟ ಪ್ರಶಸ್ತಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಲನಚಿತ್ರ, ಉತ್ತಮ ಸಾಮಾಜಿಕ ಚಿತ್ರ, ಬೆಸ್ಟ್ ಫೀಚರ್ ಫಿಲಂ, ಉತ್ತಮ ಛಾಯಾಗ್ರಹಣ ಪ್ರಶಸ್ತಿ, ಉತ್ತಮ ಕಥೆ, ಹೀಗೆ ಸುಮಾರು 78 ವಿವಿಧ ವಿಭಾಗಗಳಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ‘ನಾಡ ಪೆದ ಆಶಾ’ ಒಟ್ಟು 201 ಪ್ರದರ್ಶನಗಳನ್ನು ಕಂಡಿದೆ. *ಹೆಮ್ಮೆಯ ವಿಚಾರ* ಇದೀಗ ರಾಜ್ಯ ಸರಕಾರದ ‘ಅತ್ಯುತ್ತಮ ಪ್ರಾದೇಶಿಕ ಭಾಷಾ ಚಲನಚಿತ್ರ’ ಪ್ರಶಸ್ತಿ ದೊರೆತ್ತಿರುವ ಕುರಿತು ಹರ್ಷ ವ್ಯಕ್ತಪಡಿಸಿದ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಅವರು ರಾಜ್ಯ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಕೊಡಗಿನ ಚಲನಚಿತ್ರ ಕೇತ್ರದಲ್ಲೇ ಮೊದಲ ಬಾರಿಗೆ ಇಷ್ಟೊಂದು ಪ್ರಶಸ್ತಿಗಳನ್ನು ಬಾಚಿ ದಾಖಲೆ ನಿರ್ಮಿಸಿದ ಹೆಗ್ಗಳಿಕೆ ‘ನಾಡ ಪೆದ ಆಶಾ’ ಸಿನಿಮಾದಾಗಿದ್ದು, ಈ ಪ್ರಶಸ್ತಿಗಳು ನಮಗೆ ಸ್ಫೂರ್ತಿಯನ್ನು ತುಂಬಿವೆ. ಸಿನಿಮಾ ರಂಗದಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಲು ಪ್ರೋತ್ಸಾಹವನ್ನು ನೀಡಿದೆ. ಚಿತ್ರೀಕರಣಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. *ಸಂತೋಷ ಇಮ್ಮಡಿ* ಮತ್ತೊಬ್ಬ ನಿರ್ಮಾಪಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಮಾತನಾಡಿ ಮಹಿಳಾ ಪ್ರಧಾನವಾದ ‘ನಾಡ ಪೆದ ಆಶಾ’ ಚಿತ್ರವನ್ನು ಮಹಿಳೆಯರೇ ಸೇರಿ ನಿರ್ಮಿಸಿದ್ದೇವೆ. ರಾಜ್ಯ ಸರಕಾರದ ಪ್ರಶಸ್ತಿ ದೊರೆತ್ತಿರುವುದರಿಂದ ನಮ್ಮ ಸಿನಿ ಪಯಣಕ್ಕೆ ಮತ್ತಷ್ಟು ಉತ್ತೇಜನ ದೊರೆತ್ತಂತಾಗಿದೆ. ನಮ್ಮದೇ ಚಿತ್ರ ತಂಡದ ‘ಕಂದೀಲು’ ಕನ್ನಡ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿರುವುದರಿಂದ ನಮ್ಮ ಸಂತೋಷ ಇಮ್ಮಡಿಯಾಗಿದೆ ಎಂದರು. *ಸಹಕಾರದಿಂದ ಯಶಸ್ಸು* ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಮಾತನಾಡಿ ಚಿತ್ರದ ಯಶಸ್ಸಿಗಾಗಿ ಶ್ರಮಿಸಿದ ಎಲ್ಲರ ಸಹಕಾರದಿಂದ ‘ನಾಡ ಪೆದ ಆಶಾ’ ರಾಜ್ಯ ಸರಕಾರದ ಪ್ರಶಸ್ತಿಯನ್ನು ಗೆದ್ದಿದೆ. ಈ ಪ್ರಶಸ್ತಿ ಸಿನಿಮಾ ರಂಗದ ನಮ್ಮ ಸೇವೆಗೆ ಮತ್ತಷ್ಟು ಹುಮ್ಮಸನ್ನು ತುಂಬಿದೆ. ಕೊಡವ ಚಿತ್ರರಂಗದ ಕೀರ್ತಿಯ ಪತಾಕೆ ಹೆಚ್ಚು ಎತ್ತರಕ್ಕೆ ಹಾರಬೇಕು ಎನ್ನುವುದು ನಮ್ಮ ಆಕಾಂಕ್ಷೆಯಾಗಿದೆ, ಇದಕ್ಕಾಗಿ ಮತ್ತಷ್ಟು ಶ್ರಮಿಸುತ್ತೇವೆ ಎಂದು ಹೇಳಿದರು. *ಚಿತ್ರ ತಂಡ* ಈರಮಂಡ ಹರಿಣಿ ವಿಜಯ್ ಹಾಗೂ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರು ನಿರ್ಮಿಸಿರುವ ‘ನಾಡ ಪೆದ ಆಶಾ’ ಚಿತ್ರವನ್ನು ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಚಿತ್ರಕಥೆ ಮತ್ತು ಸಂಭಾಷಣೆ ನೀಡಿ ನಿರ್ದೇಶಿಸಿದ್ದಾರೆ. ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ಕಥೆ ನೀಡಿದ್ದು, ಪ್ರದೀಪ್ ಆರ್ಯನ್, ನಿರಂಜನ್ ರಿಕ್ತಿ (ಡ್ರೋನ್) ಛಾಯಾಗ್ರಹಣ, ವಿಠಲ್ ರಂಗದೊಳ್ ಸಂಗೀತ, ಆನಂದ್ ಆನಿ, ಧನಂಜಯ್ ಕಾರೆಹಾಕ್ಲು ಸಂಕಲನವಿದ್ದು, ಆಪಾಡಂಡ ಜಗ ಮೊಣ್ಣಪ್ಪ ಅವರು ಸಾಹಿತ್ಯ ಒದಗಿಸಿದ್ದಾರೆ. ಜಗ ಮೊಣ್ಣಪ್ಪ ಹಾಗೂ ಬಯವಂಡ ಬಿನು ಸಚಿನ್ ಅವರು ಹಾಡು ಹಾಡಿದ್ದಾರೆ. ವಿಎಫ್ ಎಕ್ಸ್ ಸುಶ್ರುತ್ ಭಟ್, ಪ್ರಸಾದನ ಸ್ವಾಮಿ, ಕಾರ್ಯಕಾರಿ ನಿರ್ಮಾಪಕ ಈರಮಂಡ ವಿಜಯ್, ಸಹ ನಿರ್ದೇಶನ ನೀಲ್ ನಾಗರಾಜ್, ಇತಿಹಾಸ ಶಂಕರ್, ಸಬ್ ಟೈಟಲ್ ಚೋಕಂಡ ದಿನು ನಂಜಪ್ಪ ಹಾಗೂ ಅನಿಮಿಶ ಸ್ಟುಡಿಯೋ ಮತ್ತು ತಂಡ, ಮಿಡ್ ಸ್ಟುಡಿಯೋ ಮೈಸೂರು ಇವರು ಚಿತ್ರಕ್ಕಾಗಿ ಕಾರ್ಯನಿರ್ವಹಿಸಿದ್ದಾರೆ. ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಅಡ್ಡಂಡ ಅನಿತಾ ಕಾರ್ಯಪ್ಪ, ಬೊಳ್ಳಜಿರ ಬಿ.ಅಯ್ಯಪ್ಪ, ನೆಲ್ಲಚಂಡ ರಿಷಿ, ಈರಮಂಡ ಹರಿಣಿ ವಿಜಯ್, ವಾಂಚಿರ ವಿಠಲ್ ನಾಣಯ್ಯ, ತಾತಂಡ ಪ್ರಭಾ, ಚೆರುವಾಳಂಡ ಸುಜಲ ನಾಣಯ್ಯ, ಅಜ್ಜಿಕುಟ್ಟಿರ ಸುಬ್ಬಯ್ಯ, ತೇಲಪಂಡ ಪವನ್, ಮಾಚಂಗಡ ಶರತ್, ಕೊಟ್ಟುಕತ್ತಿರ ಆರ್ಯ ದೇವಯ್ಯ, ಈರಮಂಡ ಕೇಸರಿ ಬೋಜಮ್ಮ, ಕುಶಿ ಕಾವೇರಮ್ಮ, ಬೊಳ್ಳಜಿರ ಯಮುನಾ ಅಯ್ಯಪ್ಪ, ಅಪ್ಪಚಂಡ ಸುಚಿತ, ಕಳ್ಳಿರ ಲವಪ್ಪ, ನುಚ್ಚಿಮಣಿಯಂಡ ಕಾಶಿ, ಅಜ್ಜಮಕ್ಕಡ ವಿನು ಕುಶಾಲಪ್ಪ, ಕ್ಯಾಪ್ಟನ್ ಕಾಳಪಂಡ ಬೆಲ್ಲು ಬೋಪಯ್ಯ, ಬೀಕಚಂಡ ಪುಟ್ಟ ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಕಲಾವಿದರು ‘ನಾಡ ಪೆದ ಆಶಾ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.











