
ಮಡಿಕೇರಿ ಅ.9 NEWS DESK : ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದ ಪ್ರಕರಣವನ್ನು ಖಂಡಿಸಿ ಅ.13 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸುವುದಾಗಿ ಪ್ರಗತಿಪರ, ಚಿಂತಕರ, ದಲಿತಪರ ಸಂಘಟನೆಗಳ ಒಕ್ಕೂಟ ತಿಳಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪದಾಧಿಕಾರಿಗಳಾದ ಅಂಬೇಡ್ಕರ್ ವಿಚಾರವಾದಿ ಸಿ.ಜೆ.ಮೋಹನ್ ಮೌರ್ಯ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ವಿರುದ್ಧ ನಡೆದಿರುವ ಘಟನೆ ಸಂವಿಧಾನ ವಿರೋಧಿ ಕೃತ್ಯವಾಗಿದ್ದು, ಆ ಮೂಲಕ ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದುಷ್ಕೃತ್ಯವೆಸಗಿದ ವಕೀಲನ ವಿರುದ್ಧ ಕೇಂದ್ರ ಸರ್ಕಾರ ‘ದೇಶ ದ್ರೋಹ’ದ ಪ್ರಕರಣವನ್ನು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಗಲ್ಲಾಗಿರುವ ಸಂವಿಧಾನಕ್ಕೆ ಮಾಡಿರುವ ಅಪಮಾನದ ಘಟನೆ ಇದಾಗಿದ್ದು, ಇದನ್ನು ಪ್ರತಿಯೊಬ್ಬ ನಾಗರಿಕರು ವಿರೋಧಿಸಬೇಕೆಂದು ಕರೆ ನೀಡಿದರು. ದುಷ್ಕೃತ್ಯವೆಸಗಿದ ವಕೀಲನನ್ನು ದೆಹಲಿ ವಕೀಲರ ಸಂಘ ಸಂಘದಿಂದ ಉಚ್ಛಾಟಿಸಿದೆ. ದೆಹಲಿ ವಕೀಲರ ಸಂಘಕ್ಕೆ ಇರುವ ಬದ್ಧತೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಇಲ್ಲವೆಂದು ಟೀಕಿಸಿದ ಅವರು, ಸಂವಿಧಾನದ ಬಗ್ಗೆ ಬಿಜೆಪಿಗೆ ಗೌರವವಿದ್ದಲ್ಲಿ ತಪ್ಪಿತಸ್ಥನ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಲಿ ಎಂದು ಆಗ್ರಹಿಸಿದರು. ಪ್ರಗತಿಪರ ಚಿಂತಕ ಎಸ್.ಐ.ಮುನೀರ್ ಅಹಮದ್ ಮಾತನಾಡಿ, ಇದು ನ್ಯಾಯಮೂರ್ತಿಗಳನ್ನು ಅವಮಾನಿಸಿದ ಘಟನೆಯಲ್ಲ, ಬದಲಾಗಿ ಸಂವಿಧಾನಕ್ಕೆ ತೋರಿದ ಅಗೌರವ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಗತಿಪರ ಚಿಂತಕ ನೆರವಂಡ ಉಮೇಶ್ ಮಾತನಾಡಿ, ನ್ಯಾಯಮೂರ್ತಿಗಳ ವಿರುದ್ಧ ನಡೆದಿರುವ ಈ ಪ್ರಕರಣ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಚಿಂತನೆಯನ್ನು ಮೂಡಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ಪರಿಶಿಷ್ಟ ಜಾತಿ ಘಟಕದ ನೌಕರರ ಸಂಘದ ಗೌರವ ಅಧ್ಯಕ್ಷ ವಿನಯ್ ಹಾಗೂ ಪ್ರಗತಿಪರ ಚಿಂತಕ ಇಸಾಖ್ ಖಾನ್ ಉಪಸ್ಥಿತರಿದ್ದರು.









