

ಮಡಿಕೇರಿ NEWS DESK ಅ.9 : ಕಾಟಕೇರಿಯ ‘ಹರ್ ಮಂದಿರ’ ವಸತಿ ಶಾಲೆಯಲ್ಲಿ ಅಗ್ನಿ ಅವಘಡಕ್ಕೆ ತುತ್ತಾಗಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗಿರುವ ಮಕ್ಕಳು ಹಾಗೂ ಸಿಬ್ಬಂದಿಗಳ ಆರೋಗ್ಯವನ್ನು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಗುರುವಾರ ಭೇಟಿ ನೀಡಿ ವಿಚಾರಿಸಿದರು. ಅಗ್ನಿ ಅವಘಡಕ್ಕೆ ಕಾರಣ ಮತ್ತಿತರ ಬಗ್ಗೆ ಅಲ್ಲಿನ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಎ.ಎಸ್.ಪೊನ್ನಣ್ಣ ಅವರು ವಸತಿ ಶಾಲೆಯಲ್ಲಿ ಆಕಸ್ಮಿಕವಾಗಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಎರಡನೇ ತರಗತಿಯ ವಿದ್ಯಾರ್ಥಿ ಮೃತಪಟ್ಟು, ಇಬ್ಬರು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮಾಹಿತಿ ದೊರೆತ ತಕ್ಷಣ ಆಗಮಿಸಿ ಮಕ್ಕಳ ಹಾಗೂ ಸಿಬ್ಬಂದಿಯ ಆರೋಗ್ಯ ವಿಚಾರಿಸಿ ಮಾಹಿತಿ ಪಡೆದಿದ್ದೇನೆ ಎಂದರು. ಮಾಹಿತಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಅವರು ಭೇಟಿ ನೀಡಿ ಪರಿಶೀಸಿದ್ದಾರೆ ಎಂದು ತಿಳಿಸಿದರು. ವಿದ್ಯುತ್ ಅವಘಡ ಬಗ್ಗೆ ಸತ್ಯ ಹೊರಬರಬೇಕು. ಆ ನಿಟ್ಟಿನಲ್ಲಿ ತನಿಖೆಯಿಂದ ತಿಳಿಯಲಿದೆ ಎಂದು ಎ.ಎಸ್.ಪೊನ್ನಣ್ಣ ಅವರು ವಿವರಿಸಿದರು. ವಸತಿ ಶಾಲೆಯವರ ನಿರ್ಲಕ್ಷ್ಯ ಇದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಮೃತಪಟ್ಟ ವಿದ್ಯಾರ್ಥಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಪ್ರಕಟಿಸಲಾಗಿದೆ, ಹೆಚ್ಚಿನ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಅವರ ಗಮನ ಸೆಳೆಯಲಾಗುವುದು ಎಂದು ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು. ಹರ್ ಮಂದಿರ್ ವಸತಿ ಶಾಲೆಗೆ ಒಳ್ಳೆಯ ಹೆಸರಿದ್ದು, ವಿದ್ಯುತ್ ಅವಘಡ ಬಗ್ಗೆ ಸೂಕ್ತ ತನಿಖೆ ಮಾಡಿಸಲಾಗುವುದು. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ವಸತಿ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳು ಓದುತ್ತಿದ್ದು, ಹೊರ ಜಿಲ್ಲೆಯಿಂದಲೂ ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ಕಲಿಯುತ್ತಿರುವ ಬಗ್ಗೆ ಮಾಹಿತಿ ಇದೆ ಎಂದರು. ಬಳಿಕ ವಸತಿ ಶಾಲೆಗೆ ಭೇಟಿ ಪರಿಶೀಲಿಸಿ ಮಾಹಿತಿ ಪಡೆದರು. ನಂತರ ವಿದ್ಯುತ್ ಅವಘಡಕ್ಕೆ ತುತ್ತಾಗಿ ಬಲಿಯಾದ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಂತ್ವಾನ ಹೇಳಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಪ್ರಮುಖರಾದ ತೆನ್ನಿರ ಮೈನಾ, ಸೂರಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ತಹಶೀಲ್ದಾರ್ ಶ್ರೀಧರ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯ ಅಧಿಕಾರಿಗಳು ಇತರರು ಇದ್ದರು.









