
ಮಡಿಕೇರಿ ಅ.13 NEWS DESK : ವಿರಾಜಪೇಟೆ ಜನ ಸೇವಾ ಟ್ರಸ್ಟ್, ಕೊಡಗು ಬ್ಲಡ್ ಡೊನರ್ಸ್ ಹಾಗೂ ಮಡಿಕೇರಿ ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ವಿರಾಜಪೇಟೆಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಶಿಬಿರದಲ್ಲಿ 56 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ರಕ್ತದ ಅಭಾವ ಇರುವ ಕಾರಣ ಕೊಡಗು ಬ್ಲಡ್ ಡೋನರ್ಸ್ ನಿಂದ ವಿರಾಜಪೇಟೆಯ ಯುವಕರಲ್ಲಿ ಐದು ಯೂನಿಟ್ ರಕ್ತಕ್ಕಾಗಿ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ವಿರಾಜಪೇಟೆಯ ಯುವಕರ ತಂಡ ನಾವೇ ಶಿಬಿರ ಆಯೋಜಿಸಿ 50ಯೂನಿಟ್ ರಕ್ತವನ್ನು ನೀಡುವುದಾಗಿ ಭರವಸೆ ನೀಡದ್ದರು. ಅದರಂತೆ ಕೇವಲ 24 ಗಂಟೆಗಳಲ್ಲಿ ಶಿಬಿರ ಆಯೋಜಿಸಿ 56 ಯೂನಿಟ್ ರಕ್ತವನ್ನು ಸಂಗ್ರಹಿಸುವುದರ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು. :: ಕರ್ತವ್ಯಕ್ಕೂ ಸೈ ಸಮಾಜ ಸೇವೆಗೂ ಎತ್ತಿದ ಕೈ :: ರಕ್ತದ ಅಭಾವ ಇರುವ ಹಲವು ಸಂದೇಶಗಳನ್ನು ಮನಗಂಡ ವಿರಾಜಪೇಟೆ ಪೊಲೀಸರು ತಮ್ಮ ಕರ್ತವ್ಯದ ನಡುವೆಯೂ ಶಿಬಿರಕ್ಕೆ ಆಗಮಿಸಿ ರಕ್ತದಾನ ಮಾಡಿದರು. ಶಿಬಿರದಲ್ಲಿ ವಿರಾಜಪೇಟೆಯ ವೃತ್ತ ನಿರೀಕ್ಷಕರಾದ ಅನುಪ್ ಮಾದಪ್ಪ, ಠಾಣಾಧಿಕಾರಿ ಹೆಚ್.ಎಸ್.ಪ್ರಮೋದ್ ಮತ್ತು ಹತ್ತಕ್ಕಿಂತ ಹೆಚ್ಚು ಪೊಲೀಸ್ ಸಿಬ್ಬಂದಿಗಳು ರಕ್ತದಾನ ಮಾಡುವುದರ ಮೂಲಕ ಸರ್ವರಿಗೂ ಮಾದರಿಯಾಗಿದ್ದಾರೆ. ವೃತ್ತ ನಿರೀಕ್ಷಕ ಅನುಪ್ ಮಾದಪ್ಪ 17ನೇ ಬಾರಿಗೆ ರಕ್ತದಾನ ಮಾಡುವುದರ ಮೂಲಕ ಎಲ್ಲರಿಗೂ ಮಾದರಿಯಾದರು. ರಕ್ತದಾನ ಮಾಡಿದ ಸರ್ವರಿಗೂ ಜನ ಸೇವಾ ಟ್ರಸ್ಟ್ ಹಾಗೂ ಕೊಡಗು ಬ್ಲಡ್ ಡೊನರ್ಸ್ ನ ಪದಾಧಿಕಾರಿಗಳು ರಕ್ತದಾನಿಗಳಿಗೆ ಧನ್ಯವಾದ ಸಮರ್ಪಣಾ ಪತ್ರವನ್ನು ವಿತರಿಸಿದರು. ಈ ಸಂದರ್ಭ ಕೊಡಗು ಬ್ಲಡ್ ಡೋನರ್ಸ್ ನ ಪ್ರಧಾನ ಕಾರ್ಯದರ್ಶಿ ಮೈಕಲ್ ವೇಗಸ್, ಜನ ಸೇವಾ ಟ್ರಸ್ಟ್ ನ ಪದಾಧಿಕಾರಿಗಳಾದ ಶರೀಫ್, ರಫ್ಶಿರ್, ಸಾಬಿತ್, ಫೈಝಲ್ ಅಡ್ಡು ಹಾಜರಿದ್ದರು.









