
ಮಡಿಕೇರಿ ಅ.14 NEWS DESK : ಸಾಹಿತ್ಯದ ಮೂಲಕ ಎಲ್ಲೆಯನ್ನು ಮೀರಬಹುದು ಮತ್ತು ವಿಶ್ವದ ಅನೇಕ ಸಾಹಿತ್ಯಗಳ ಪರಿಚಯ ನಮಗಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸಾಹಿತ್ಯದ ಬಗ್ಗೆ ಹೆಚ್ಚಿನ ಅಭಿರುಚಿಯನ್ನು ರೂಡಿಸಿಕೊಳ್ಳಬೇಕು ಎಂದು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಅವರು ಹೇಳಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಆಂಗ್ಲಮಾಧ್ಯಮ ವಿಭಾಗದ ವತಿಯಿಂದ ಕಾಲೇಜಿನ ವಿಚಾರ ಸಂಕಿರಣ ಸಭಾಂಗಣದಲ್ಲಿ ನಡೆದ ಆಂಗ್ಲ ವಿಭಾಗದ “ಜಾಯ್ಸ್” ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ.ಬಿ.ರಾಘವ ಅವರು, ಆಂಗ್ಲ ಐಚ್ಚಿಕ ವಿದ್ಯಾರ್ಥಿಗಳು ಸಾಹಿತ್ಯದ ಬಗ್ಗೆ ಹೆಚ್ಚಿನ ಒಲವು ಹೊಂದಿರಬೇಕು ಮತ್ತು ವಿವಿಧ ಸಾಹಿತ್ಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ವಿಭಾಗದ ಮುಖ್ಯಸ್ಥರಾದ ಪ್ರೊ. ನಯನಾ ಕಶ್ಯಪ್ ಮತ್ತು ಸಹ ಪ್ರಾಧ್ಯಾಪಕರಾದ ಕೆ.ಎಂ.ಪೂಣಚ್ಚ, ಹೆಚ್.ಆರ್.ರಮೇಶ್, ಅಲೋಕ್ ಬಿ ಜೈ ಹಾಗೂ ಉಪನ್ಯಾಸಕರಾದ ಎಂ.ಪಿ.ಡೀನಾ, ಕನ್ನಿಕಾ ಮತ್ತು ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಮಡಿಕೇರಿಯಲ್ಲಿನ ವಾರದ ಸಂತೆಗೆ ಉಪನ್ಯಾಸಕರುಗಳ ಮಾರ್ಗದರ್ಶನದಲ್ಲಿ ತೆರಳಿ ಅಲ್ಲಿನ ವ್ಯಾಪಾರಿಗಳ ಜೊತೆಗೆ ಪ್ರಾಯೋಗಿಕವಾಗಿ ಸಂದರ್ಶನ ಮಾಡಲಾಗಿತ್ತು. ಮಾರುಕಟ್ಟೆ ವಿಷಯಕ್ಕೆ ಸಂಬಂಧಿಸಿದಂತೆ ನಾಟಕ, ಕಥೆ,ಭಾಷಣ, ಪದ್ಯ ಮತ್ತು ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಾರ್ಯಕ್ರಮ ದಿನದಂದು ಬಹುಮಾನ ನೀಡಲಾಯಿತು. ಮಾರುಕಟ್ಟೆ ಜನರ ಜೀವನ ಕುರಿತು ಕಥೆ ರಚಿಸಿದ ನಾಫಿಯ ತಂಡದವರಿಗೆ ಪ್ರಥಮ ಬಹುಮಾನ, ನಾಟಕ ಪ್ರದರ್ಶನ ಮಾಡಿದ ಶಿಫಾ ತಂಡದವರಿಗೆ ದ್ವೀತಿಯ ಬಹುಮಾನ ಮತ್ತು ಭಾಷಣ ಮಾಡಿದ ವರ್ಷ ತಂಡದವರು ತೃತೀಯ ಬಹುಮಾನವನ್ನು ಪಡೆದುಕೊಂಡರು.









