
ಮಡಿಕೇರಿ ಅ.14 NEWS DESK : ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ನೇತೃತ್ವದಲ್ಲಿ ಕೊಡಗು ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯತ್, ಕೊಡಗು ಚೇಂಬರ್ ಆಫ್ ಕಾಮರ್ಸ್, ಕೊಡಗು ಹೋಂಸ್ಟೇ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಅ.15ರಂದು ನಡೆಯುವ ‘ಸ್ವಚ್ಛ ಕೊಡಗು ಸುಂದರ ಕೊಡಗು’ ಅಭಿಯಾನದಲ್ಲಿ ಕೊಡಗು ಕಲಾವಿದರ ಸಂಘ ಪಾಲ್ಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ತಿಳಿಸಿದ್ದಾರೆ. ಕೊಡಗು ಕಲಾವಿದರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಬುಧವಾರ ನಡೆಯುವ ಅಭಿಯಾನದಲ್ಲಿ ತಾವಿರುವ ಪ್ರದೇಶದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಪ್ರಕೃತಿ ಸೌಂದರ್ಯದ ಕಾವೇರಿನಾಡು ಕೊಡಗು ದಕ್ಷಿಣ ಕಾಶ್ಮೀರವೆಂದೇ ಖ್ಯಾತಿ ಗಳಿಸಿದೆ. ಇಲ್ಲಿನ ಸುಂದರ ಪರಿಸರ ದೇಶ ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಈ ಹಸಿರ ಪ್ರಕೃತಿಯ ಸೊಬಗನ್ನು ಉಳಿಸಿಕೊಳ್ಳಲು ಮತ್ತು ಸಂರಕ್ಷಿಸಲು ಸ್ವಚ್ಛತೆಗೆ ಆದ್ಯತೆ ನೀಡುವ ಅಗತ್ಯವಿದೆ. ಸ್ವಚ್ಛತೆಯಿಂದ ಮಾತ್ರ ಕಾವೇರಿಯ ತವರೂರು ಕೊಡಗು ಸುಂದರವಾಗಿರಲು ಸಾಧ್ಯ. ಆದ್ದರಿಂದ ಸ್ವಚ್ಛತಾ ಅಭಿಯಾನಕ್ಕೆ ಕೊಡಗು ಕಲಾವಿದರ ಸಂಘ ಸದಾ ಸಿದ್ಧವಾಗಿರುತ್ತದೆ ಎಂದು ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಹೇಳಿದ್ದಾರೆ.









