
ಮಡಿಕೇರಿ NEWS DESK ಅ.15 : ಆದಿಮಸಂಜಾತ ಏಕ-ಜನಾಂಗೀಯ ಕೊಡವರ ಪವಿತ್ರ ಜಲದೇವತೆ ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿಯನ್ನು ‘ಕೊಡವರ ಪವಿತ್ರ ಯಾತ್ರಾಸ್ಥಳವೆಂದು ಗುರುತಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಆದಿಮಸಂಜಾತ ಏಕ-ಜನಾಂಗೀಯ ಕೊಡವರು, ಆನಿಮಿಸ್ಟಿಕ್ ನಂಬಿಕೆಯುಳ್ಳವರಾಗಿದ್ದು, ಅವರ ಎಲ್ಲಾ ಜಾನಪದ ಆಚರಣೆಗಳು ಪವಿತ್ರ ಜಲದೇವತೆ ಹಾಗೂ ಜೀವನಾಡಿ ಕಾವೇರಿ ನದಿಯ ಸುತ್ತ ಸುತ್ತುತ್ತವೆ. ಆದ್ದರಿಂದ ಸರಕಾರ ಜೆರುಸಲೆಮ್‌ನಲ್ಲಿರುವ ಯಹೂದಿಗಳ ದೇವಾಲಯ ಮೌಂಟ್ ಮೊರಿಯಾದ ಮಾದರಿಯಲ್ಲಿ ತಲಕಾವೇರಿಯನ್ನು ಕೊಡವರ ಪವಿತ್ರ ತೀರ್ಥಯಾತ್ರಾ ಸ್ಥಳವೆಂದು ಗುರುತಿಸಬೇಕೆಂದು ಒತ್ತಾಯಿಸಿ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಕೇಂದ್ರ ಗೃಹಮಂತ್ರಿಗಳು, ಮುಖ್ಯಮಂತ್ರಿಗಳು ಹಾಗೂ ವಿಶ್ವರಾಷ್ಟç ಸಂಸ್ಥೆಯ ಮಹಾ ಕಾರ್ಯದರ್ಶಿಗಳಿಗೆ ಜ್ಞಾಪನಾ ಪತ್ರ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಆದಿಮಸಂಜಾತ ಕೊಡವರು ಅ.17 ರಂದು ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಮತ್ತು ಆಚರಿಸಲು ಸಜ್ಜಾಗಿದ್ದಾರೆ. ಆನಿಮಿಸ್ಟಿಕ್ ನಂಬಿಕೆಯುಳ್ಳ ಆದಿಮಸಂಜಾತ ಕೊಡವರು ಪವಿತ್ರ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ಸಿಎನ್‌ಸಿ ಸಂಘಟನೆ ಕೊಡವರ ಮಹತ್ವದ ಆಧ್ಯಾತ್ಮಿಕ ಮತ್ತು ಕಾನೂನುಬದ್ಧ ಆಕಾಂಕ್ಷೆಗಳನ್ನು ಭಾರತ ಸರಕಾರ ಹಾಗೂ ಕರ್ನಾಟಕ ಸರಕಾರದ ಮುಂದೆ ಮಂಡಿಸುತ್ತಿದೆ ಎಂದು ಹೇಳಿದ್ದಾರೆ. *ಬೇಡಿಕೆಗಳು* ತಲಕಾವೇರಿಯನ್ನು ಜೆರುಸಲೆಮ್ ಮಾದರಿಯಲ್ಲಿ ಕೊಡವರ ಪವಿತ್ರ ಯಾತ್ರಾಸ್ಥಳವೆಂದು ಗುರುತಿಸಬೇಕು. ಕಾವೇರಿ ನದಿಗೆ ಜೀವರಾಶಿ ಸ್ಥಾನಮಾನವನ್ನು ಲಿವಿಂಗ್‌ಎಂಟಿಟಿ ವಿತ್ ಲೀಗಲ್ ಪರ್ಸನ್ ರೀತಿಯಲ್ಲಿ ನೀಡಬೇಕು. ಭರತ ವರ್ಷದ (ಸಿಂಧು, ಗಂಗಾ, ಯಮುನಾ, ಅದೃಶ್ಯ ಸರಸ್ವತಿ, ನರ್ಮದಾ, ಗೋದಾವರಿ ಮತ್ತು ಕಾವೇರಿ) ಏಳು ಪವಿತ್ರ ನದಿಗಳಲ್ಲಿ ಒಂದಾದ ಕಾವೇರಿ, ದಕ್ಷಿಣ ಭಾರತದ ಎಲ್ಲಾ ಜೀವರಾಶಿಗಳಿಗೆ ಜೀವನಾಡಿ ಮತ್ತು ನೀರಿನ ಮೂಲವಾಗಿದೆ. ಅದರ ಶಾಶ್ವತ ಜಲಮೂಲಗಳನ್ನು ರಕ್ಷಿಸಲು, ಆಧ್ಯಾತ್ಮಿಕ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಮತ್ತು ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಸರಕಾರಗಳು ಕಾವೇರಿ ನದಿಯನ್ನು ಕಾನೂನುಬದ್ಧ ವ್ಯಕ್ತಿಯ ಸ್ಥಾನಮಾನದೊಂದಿಗೆ ಜೀವಂತ ಅಸ್ತಿತ್ವವೆಂದು ಘೋಷಿಸಬೇಕು. ಉದಾಹರಣೆಗೆ ನ್ಯೂಜಿಲೆಂಡ್‌ನ ಮಾವೋರಿ ಆದಿಮಸಂಜಾತ ಬುಡಕಟ್ಟು ಜನಾಂಗದವರಿಗೆ ಮಹತ್ವದ ನದಿಯಾದ “ವಂಗನುಯಿ” ನದಿಗೆ 2017 ರಲ್ಲಿ ಕಾನೂನುಬದ್ಧ ವ್ಯಕ್ತಿತ್ವ ನೀಡಲಾಯಿತು.
ಕಾವೇರಿ ನದಿಯು ಕೊಡವಲ್ಯಾಂಡ್‌ನ ಪಶ್ಚಿಮಘಟ್ಟಗಳಲ್ಲಿರುವ ಬ್ರಹ್ಮಗಿರಿ ಶ್ರೇಣಿಯ ಪರ್ವತ ಪ್ರದೇಶದಿಂದ ಒಂದು ಚಿಲುಮೆಯಾಗಿ ಹುಟ್ಟುತ್ತದೆ. ಇದು ಪೂರ್ವಾಭಿಮುಖವಾಗಿ ಹರಿಯುತ್ತದೆ ಮತ್ತು ತಮಿಳುನಾಡಿನ ಪೂಂಪುಹಾರ್‌ನಲ್ಲಿ ಬಂಗಾಳಕೊಲ್ಲಿ ಸಾಗರದೊಂದಿಗೆ ಸಂಗಮವಾಗುತ್ತದೆ. ಕಾವೇರಿ ನೀರಿನ ವಾರ್ಷಿಕ ಇಳುವರಿ 740 ಟಿಎಂಸಿ (ತೌಸಂಡ್ ಮಿಲಿಯನ್ ಕ್ಯೂಬಿಕ್ ಫೀಟ್) ಅಡಿ, ಅದರಲ್ಲಿ 200 ಟಿಎಂಸಿ ಕೊಡವಲ್ಯಾಂಡ್‌ನ ಕಾನೂನುಬದ್ಧ ಉತ್ಪತ್ತಿ. ಹೆಲ್ಸಿಂಕಿ ಕಾನೂನು (1966) ಪ್ರಕಾರ, ಉತ್ಪಾದಕ ಪ್ರದೇಶವು ಅದರ ಹಕ್ಕಿನ ಪಾಲನ್ನು ಪಡೆಯುತ್ತದೆ. ಆದ್ದರಿಂದ, ಕೊಡವಲ್ಯಾಂಡ್‌ಗೆ ಕಾವೇರಿ ನೀರಿನ ತನ್ನ ಪಾಲನ್ನು ನೀಡಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ. *ಸಿಎನ್‌ಸಿ ಜಾಗೃತಿ* ನಮ್ಮ ದೈವಿಕ ತಾಯಿ, ಜೀವಸೆಲೆ ನದಿ ಕಾವೇರಿಗೆ ”ಕಾನೂನುಬದ್ಧ ವ್ಯಕ್ತಿ ಸ್ಥಾನಮಾನ” ನೀಡುವ ಕುರಿತಾಗಿ ಜಗತ್ತಿನ ಧರ್ಮ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಸಲುವಾಗಿ ಸಿಎನ್‌ಸಿ 2018 ರಲ್ಲಿ ತಲಕಾವೇರಿ (ಕಾವೇರಿ ನದಿಯ ಜನ್ಮಸ್ಥಳ/ಮೂಲ) ದಿಂದ ಪೂಂಪುಹಾರ್ (ಕಾವೇರಿ ನದಿ ಬಂಗಾಳಕೊಲ್ಲಿಯೊಂದಿಗೆ ಸಂಗಮಿಸುವ ಸ್ಥಳ) ವರೆಗೆ ಆಧ್ಯಾತ್ಮಿಕ ಯಾತ್ರೆಯನ್ನು ಕೈಗೊಂಡಿತ್ತು ಎಂದು ಗಮನ ಸೆಳೆದಿದ್ದಾರೆ. ಕೊಡವ ಸಮುದಾಯದ ಹಕ್ಕುಗಳು ಮತ್ತು ಹಿತಾಸಕ್ತಿಗಳಿಗಾಗಿ ಸಿಎನ್‌ಸಿ ಸಂಘಟನೆ ನಿರಂತರವಾಗಿ ಶ್ರಮಿಸುತ್ತಿದೆ. ಕೊಡವರ ವಿಶಿಷ್ಟ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಜನಾಂಗೀಯ ಪರಂಪರೆಯನ್ನು ಉಳಿಸಿ ಬೆಳೆಸುವ ಸಲುವಾಗಿ ಶಾಂತಿಯುತ ಹೋರಾಟಗಳನ್ನು ನಡೆಸುತ್ತಾ ಬರುತ್ತಿದೆ. ಕಾವೇರಿ ನದಿಯೊಂದಿಗೆ ಆಳವಾಗಿ ಬೇರೂರಿರುವ ಕೊಡವ ಸಮುದಾಯದ ಸಂಪರ್ಕವು ಅವರ ಆಚರಣೆಗಳು, ಜಾನಪದ ಮತ್ತು ಆಧ್ಯಾತ್ಮಿಕ ಜೀವನದ ಅಡಿಪಾಯವನ್ನು ರೂಪಿಸುತ್ತದೆ ಎಂದು ತಿಳಿಸಿದ್ದಾರೆ.











