
ಮಡಿಕೇರಿ ಅ.16 NEWS DESK : ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಶಿಕ್ಷಕರ ಸಮಸ್ಯೆ ಕುರಿತು ವಿಧಾನ ಸೌಧ ಕಚೇರಿಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಸಮಾಲೋಚನೆ ನಡೆಸಿದರು. ಈ ಸಂದರ್ಭ ಬುಡಕಟ್ಟು ವಸತಿ ಶಾಲೆಯ ಶಿಕ್ಷಕರು ಪರಿಶಿಷ್ಟ ವರ್ಗಗಳ ಅಧೀನದಲ್ಲಿ ಇರುವ ಮಹರ್ಷಿ ವಾಲ್ಮೀಕಿ ಆದಿವಾಸ ಬುಡಕಟ್ಟು ವಸತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿತ್ತಿರುವ ಹತ್ತು ವರ್ಷಕ್ಕೂ ಮೇಲ್ಪಟ್ಟು ಸೇವಾ ಸಲ್ಲಿಸುತ್ತಿರುವ ಶಿಕ್ಷಕರನ್ನು ಸಕ್ರಮಗೊಳಿಸುವುದು. ಅರ್ಜಿ ಸಮಿತಿಯ ತೀರ್ಮಾನದಂತೆ ನೇರ ನೇಮಕಾತಿ/ ಸೇವಾ ಭದ್ರತೆ ಒದಗಿಸುವುದು ಹಾಗೂ ಖಿ.ಇ.ಖಿ ಯಿಂದ ವಿನಾಯಿತಿ ಒದಗಿಸುವುದು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಪ್ರಾಂಶುಪಾಲರ ಮತ್ತು ಶಿಕ್ಷಕರ ಸೇವೆಯನ್ನು ವಿಲೀನ ಗೊಳಿಸಿರುವ ರೀತಿ ಇವರನ್ನು ಸಹ ವಿಲೀನಗೊಳಿಸುವುದು. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಸಂಘ ರಚನೆಯಾಗಿರುವಂತೆ ರಾಜ್ಯದ 119 ವಾಲ್ಮೀಕಿ ಆಶ್ರಮ ಶಾಲೆಗಳಿಗೆ ಸಂಘ ರಚಿಸಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ 10 ವರ್ಷ ಮೇಲ್ಪಟ್ಟು ದುಡಿಯಿತ್ತಿರುವ ಶಿಕ್ಷಕರನ್ನು ಸಂಘದಲ್ಲಿ ವಿಲೀನ ಮಾಡಿ ಸಕ್ರಮಾತಿ/ ಸೇವಾ ಭದ್ರತೆ ಒದಗಿಸುವುದು. ಉಚ್ಚನ್ಯಾಯಾಲಯದ ಆದೇಶದಂತೆ ಕರ್ನಾಟಕ ವಸತಿ ಶಿಕ್ಷಣದ ಅಧೀನದಲ್ಲಿರುವ ಹೊರಸಂಪನ್ಮೂಲ ಭೋದಕ ಹಾಗೂ ಭೋದಕೇತರ ಸೇವಾ ಸಕ್ರಮಾತಿಯಂತೆ ನಮ್ಮನ್ನು ಪರಿಗಣಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಕ್ರಮಗೊಳಿಸುವ ಬಗ್ಗೆ ಕ್ರಮವಹಿಸಲು ಅಧಿಕಾರಿಗಳಿಗೆ ಶಾಸಕರು ತಿಳಿಸಿದರು. ಸಭೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಂದೀಪ್ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.









