
ಸುಂಟಿಕೊಪ್ಪ ಅ.15 NEWS DESK : ಸ್ವಚ್ಛ ಕೊಡಗು – ಸುಂದರ ಕೊಡಗು” ಅಭಿಯಾನದ ಅಂಗವಾಗಿ ಸುಂಟಿಕೊಪ್ಪದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಗದ್ದೆಹಳ್ಳ ಮಹಾತ್ಮಗಾಂಧಿ ವೃತ್ತದಿಂದ ಆರಂಭಿಸಿ ಸುಂಟಿಕೊಪ್ಪದ ಅಯ್ಯಪ್ಪ ದೇವಸ್ಥಾನದವರೆಗೆ ಸ್ವಚ್ಛತೆಯನ್ನು ನಡೆಸುವ ಮೂಲಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್, ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಹಾಗೂ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ದಿನೇಶ್ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ, ಹೋಟೆಲ್ ಮಾಲೀಕರ ಹಾಗೂ ಹೊಂಸ್ಟೇ ಮಾಲೀಕರ ಸಂಘದ ವತಿಯಿಂದ “ಸ್ವಚ್ಛ ಕೊಡಗು-ಸುಂದರ ಕೊಡಗು” ಅಭಿಯಾನಕ್ಕೆ ಗದ್ದೆಹಳ್ಳದಲ್ಲಿ ಚಾಲನೆ ನೀಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬಿದ್ದಿರುವ ಸಾಕಷ್ಟು ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕಸಕಡ್ಡಿಗಳು ಸೇರಿದಂತೆ ಇತರೆ ತ್ಯಾಜ್ಯಗಳನ್ನು ಹೆಕ್ಕಿ ಟ್ರಾಕ್ಟರ್ ವಾಹನಗಳಲ್ಲಿ ತುಂಬಿಸಿ ಕಸ ವಿಲೇವಾರಿ ಘಟಕದಲ್ಲಿ ವಿಲೇವಾರಿಗೊಳಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಎ. ಶಬೀರ್, ಹೆಚ್.ಯು.ರಫೀಕ್ ಖಾನ್, ಕೆ.ಎಂ.ಆಲಿಕುಟ್ಟಿ, ಎಂ.ಎಸ್.ಜಿನಾಷುದ್ಧೀನ್, ಮಾಜಿ ಅಧ್ಯಕ್ಷ ಕೆ.ಇ. ಕರೀಂ, ಮಾಜಿ ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಮಾಜಿ ಸದಸ್ಯ ಹನೀಫ್, ಪಂಚಾಯಿತಿ ಸಿಬ್ಬಂದಿಗಳಾದ ಚಂದ್ರಕಲಾ, ಶ್ರೀನಿವಾಸ್, ಸಂಧ್ಯಾ ಹಾಗೂ ಪೌರಕಾರ್ಮಿಕರು ಹಾಗೂ ಗ್ರಾಮದ ಮುಖಂಡರಾದ ಇಸಾಕ್‍ಖಾನ್, ಹೊಟೇಲ್ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.









