
ಮಡಿಕೇರಿ ಅ.17 NEWS DESK : ಹಿಂದೂ ಮಲಯಾಳಿ ಸಂಘದ ವತಿಯಿಂದ ಅ.19 ರಂದು ನಗರದಲ್ಲಿ ಮಲಯಾಳಿ ಬಾಂಧವರ ‘ಓಣಾ ಘೋಷಂ-ಓಣಂ ಸಧ್ಯ’ ಹಬ್ಬ ಆಚರಿಸಲಾಗುವುದೆಂದು ಸಂಘದ ಅಧ್ಯಕ್ಷ ಕೆ.ವಿ.ಧರ್ಮೇಂದ್ರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಓಣಂ ಹಬ್ಬವನ್ನು ನಮ್ಮ ಸಂಸ್ಕೃತಿ ಆಚಾರ, ವಿಚಾರಗಳ ಸಂರಕ್ಷಣೆಯೊಂದಿಗೆ, ಅದನ್ನು ಯುವ ಸಮೂಹಕ್ಕೆ ತಿಳಿಯಪಡಿಸುವ ಉದ್ದೇಶದಿಂದ ಆಚರಿಸಿಕೊಮಡು ಬರಲಾಗುತ್ತಿದೆ. ಈ ಬಾರಿಯ ಹಬ್ಬಾಚರಣೆ ನಗರದ ಕಾವೇರಿ ಹಾಲ್‍ನಲ್ಲಿ ನಡೆಯಲಿದೆಯೆಂದು ಹೇಳಿದರು. ಓಣಂ ಆಚರಣಾ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್ ಮಾತನಾಡಿ, ಅ.19ರ ಭಾನುವಾರ ಬೆಳಿಗ್ಗೆ ಪೂಕಳಂ ಸ್ಪರ್ಧೆ, ಛದ್ಮವೇಷ ಹಾಗೂ ಮಾವೇಲಿ ಮತ್ತು ಚಂಡೆ ವಾದ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದರು. ಬೆಳಿಗ್ಗೆ 10.30 ಗಂಟೆಗೆ ಸಾಂಪ್ರದಾಯಿಕ ತಿರುವಾದಿ ನೃತ್ಯದ ನಂತರ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ವಿ.ಧರ್ಮೇಂದ್ರ ವಹಿಸಲಿದ್ದಾರೆಂದರು. ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಹಿಂದೂ ಮಲಯಾಳಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ ಹಾಗೂ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಮಡಿಕೇರಿ ಹಿಂದೂ ಮಲಯಾಳಿ ಸಂಘದ ಗೌರವ ಸಲಹೆಗಾರ ಜಿ.ಆರ್.ವಾಸುದೇವನ್ ಪಾಲ್ಗೊಳ್ಳಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ ಸಂಘದ ಅಧ್ಯಕ್ಷ ಕೆ.ವಿ.ಧರ್ಮೇಂದ್ರ, ಪ್ರಧಾನ ಕಾರ್ಯದರ್ಶಿ ಹೆಚ್.ಪಿ.ಅಶೋಕ್, ಉಪಾಧ್ಯಕ್ಷ ವಿಜಯಕುಮಾರ್ ಪಿ. ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಾಧಕರಿಗೆ ಹಾಗೂ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಮಧ್ಯಾಹ್ನ 12.30 ಗಂಟೆಗೆ ಓಣಂ ಸಧ್ಯ ನಡೆಯಲಿದೆ. 2 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದ್ದು, ಹಿಂದೂ ಮಲಯಾಳಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟಿ.ಕೆ.ಸುಧೀರ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವ ಸಲಹೆಗಾರರಾದ ಟಿ.ಆರ್.ವಾಸುದೇವ, ಪಿ.ಟಿ.ಉಣ್ಣಿಕೃಷ್ಣ, ಉಪಾಧ್ಯಕ್ಷ ಪಿ.ವಿ.ವಿಜಯ ಕುಮಾರ್, ಪ್ರಚಾರ ಸಮಿತಿ ಸಂಚಾಲಕ ರವಿ ಅಪ್ಪುಕುಟ್ಟನ್ ಉಪಸ್ಥಿತರಿದ್ದರು.









